ಮಹಿಳೆ ತನ್ನದೇ ದಾರಿಯಲ್ಲಿ ಸಾಗಿ ಯಶಸ್ಸು ಕಾಣಬೇಕು: ಪಾಂಡಿಚೇರಿ ರಾಜ್ಯಪಾಲೆ ಕಿರಣ್ ಬೇಡಿ

Update: 2019-09-08 16:38 GMT

ಬೆಂಗಳೂರು, ಸೆ.8: ಮಹಿಳೆಯರು ಕೌಶಲ್ಯ, ನಿರಂತರ ಸಿದ್ಧತೆಯಿಂದ ತನ್ನದೇ ದಾರಿಯಲ್ಲಿ ಮುಂದೆ ಸಾಗಿ ಯಶಸ್ಸನ್ನು ಕಾಣಬೇಕು ಎಂದು ಪಾಂಡಿಚೇರಿ ರಾಜ್ಯದ ರಾಜ್ಯಪಾಲೆ ಕಿರಣ್ ಬೇಡಿ ಸಲಹೆ ಮಾಡಿದ್ದಾರೆ.

ರವಿವಾರ ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಜೆ.ಎನ್.ಟಾಟಾ ಸಭಾಂಗಣದಲ್ಲಿ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ವಿಶ್ವ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಅವಲಂಬನಾ ಮನಸ್ಥಿತಿಯಿಂದ ಹೊರಬಂದು ಕೌಶಲ್ಯ, ನೈಪುಣ್ಯತೆಯಿಂದ ತನ್ನದೇ ದಾರಿಯಲ್ಲಿ ಮುಂದೆ ಸಾಗಬೇಕು ಹೇಳಿದರು.

ಪುರುಷರು ಹುಟ್ಟಿನಿಂದಲೇ ದೈಹಿಕ ಶಕ್ತಿ, ಹಣ, ಚಲನಶೀಲತೆಯನ್ನು ಪಡೆದುಕೊಂಡಿರುತ್ತಾರೆ. ಮಹಿಳೆ ಇವುಗಳನ್ನು ಹುಟ್ಟಿದ ನಂತರ ಪಡೆದುಕೊಳ್ಳುತ್ತಿದ್ದಾಳೆ. ಜತೆಗೆ ಹುಟ್ಟಿದ ಮನೆಯಿಂದ ಮದುವೆ ನಂತರ ವಲಸೆ ಹೋಗಿ ಜೀವನ ಮಾಡಬೇಕಾದ ಸವಾಲನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ. ಮಹಿಳೆಯರು ಸ್ವಾಭಾವಿಕವಾಗಿಯೇ ನಾಯಕತ್ವ ಗುಣ ಹೊಂದಿರುತ್ತಾರೆ. ಶ್ರೇಣಿ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ಜೀವನವೇ ಸಿದ್ಧತೆಯಾಗಿದ್ದು, ನಿರ್ದಿಷ್ಟ ಕಾರಣಗಳಿಗೆ ಸದಾ ಸಿದ್ಧರಾಗುತ್ತಾ ಸಾಗಬೇಕು. ಜನರೊಂದಿಗೆ ಬೆರೆಯಿರಿ, ಹೊಸತನವನ್ನು ಹುಡುಕುವ ಪ್ರಯತ್ನವೇ ಯಶಸ್ಸಿನ ದಾರಿಯಾಗಿದೆ ಎಂದು ಕಿರಣ್ ಬೇಡಿ ತಿಳಿಸಿದರು.

ಮನೆಯಲ್ಲಿ ಅಪ್ಪ-ಅಮ್ಮ ಹೊರಗಡೆ ಅಣ್ಣ-ತಮ್ಮಂದಿರ ಅವಲಂಬನೆಯಲ್ಲಿಯೇ ಜೀವನ ಸಾಗಿಸುವ ಮನಸ್ಥಿತಿಯು ಮಹಿಳೆಯನ್ನು ಎಂದಿಗೂ ಸ್ವಾವಲಂಭಿ ಯಾಗಿಸುವುದಿಲ್ಲ. ಜತೆಗೆ ಸಾಧನೆಯಿಂದ ದೂರ ಮಾಡಿ ಸೀಮಿತ ವ್ಯಾಪ್ತಿಗೊಳಿಸುತ್ತದೆ. ಹೀಗಾಗಿ, ಕೌಶಲ್ಯ, ನಿರಂತರ ಸಿದ್ಧತೆಯಿಂದ ತನ್ನದೇ ದಾರಿಯಲ್ಲಿ ಮುಂದೆ ಸಾಗಿ ಯಶಸ್ಸನ್ನು ಕಾಣಬೇಕು ಎಂದರು.

ನಾನು 23ನೆ ವಯಸ್ಸಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಯಾಗಿದ್ದೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಆದ್ಯತೆ ಕೊಡುತ್ತಿದ್ದೆ. ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗಿ ಕೆಳಹಂತದ ಸಿಬ್ಬಂದಿಗಳಿಂದ ತುಂಬಾ ಕಲಿತಿದ್ದೇನೆ. ಬೆಳಗ್ಗೆ ಠಾಣೆಗೆ ಹೋದರೆ ಮೇಲಾಧಿಕಾರಿಗಳು ನೀವು ಯಾಕೆ ಹೋಗುತ್ತೀರಾ? ಅವರನ್ನೆ ಕರೆಸಿಕೊಳ್ಳಿ ಎಂದು ಹೇಳುತ್ತಿದ್ದರು. ಆದರೆ, ನಾನು ಅವರೊಂದಿಗೆ ಕಲಿಯಲು, ಹೊಸದನ್ನು ತಿಳಿದು ಕೊಳ್ಳಲು ಹೋಗುತ್ತಿದೆ. ಅಧಿಕಾರಿಯಾಗುವ ಮೊದಲು ನಾವು ಮೊದಲು ಓಳ್ಳೆಯ ನಾಗರಿಕರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳಾದ ಡಾ.ರಶ್ಮಿ ಕೃಷ್ಣನ್, ಡಾ.ಕಲ್ಪನಾ ಗೋಪಾಲನ್, ಡಾ.ಸೌಮ್ಯ ಮಿಶ್ರಾ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ವಿಶ್ವ ಮಹಿಳಾ ಸಮಾವೇಶ ಅಧ್ಯಕ್ಷೆ ಡಾ.ಕಾಮಿನಿ ರಾವ್, ಕಾರ್ಯದರ್ಶಿ ಡಾ. ಪದ್ಮಿನಿ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News