ಕುತೂಹಲ ಸೃಷ್ಟಿಸಿದ ಸಿಎಂ ಯಡಿಯೂರಪ್ಪ-ಜಿ.ಟಿ.ದೇವೇಗೌಡ ಭೇಟಿ

Update: 2019-09-09 12:19 GMT

ಬೆಂಗಳೂರು, ಸೆ. 9: ಜೆಡಿಎಸ್ ಹಿರಿಯ ಮುಖಂಡ, ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಸೃಷ್ಟಿಸಿದೆ. 

ಸೋಮವಾರ ಬೆಳಗ್ಗೆ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿರುವ ದವಳಗಿರಿ ನಿವಾಸದಲ್ಲಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಜಿ.ಟಿ.ದೇವೇಗೌಡ, ಪ್ರಸಕ್ತ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ನನಗೆ ನೋವಾಗಿದೆ: ಜೆಡಿಎಸ್ ಪಕ್ಷದಿಂದ ನನಗೆ ಬಹಳ ನೋವಾಗಿದೆ. ಹೀಗಾಗಿ ನಾನು ಪಕ್ಷದ ಸಭೆ, ಸಮಾರಂಭಗಳಿಂದ ದೂರ ಉಳಿದಿದ್ದೇನೆ. ಸದ್ಯ ಇನ್ನೂ ಮೂರುವರೆ ವರ್ಷ ನಾನು ಏನೂ ಮಾತನಾಡುವುದಿಲ್ಲ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಬಿಎಸ್ವೈ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರ್ಪಡೆಗೊಳ್ಳಿ ಎಂದು ಆಹ್ವಾನಿಸಿಲ್ಲ. ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಇನ್ನೂ ಯಾವುದೇ ಚಿಂತನೆಯನ್ನೂ ನಡೆಸಿಲ್ಲ ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

ನಾನು ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಮಗಾರಿಗಳ ತಡೆಯಾಗಿದ್ದು, ಅಭಿವೃದ್ಧಿ ಕಾರ್ಯಗಳು ನಿಂತಿವೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪರ ಜತೆ ಚರ್ಚಿಸಿದ್ದೇನೆ. ಸಿಎಂ ಕೂಡ ಅಧಿಕಾರಿಗಳಿಗೆ ಈ ಬಗ್ಗೆ ಸ್ಥಳದಲ್ಲೆ ಸೂಚನೆ ನೀಡಿದ್ದಾರೆ ಎಂದು ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದರು.

‘ನಾನು ಬೇರೆ ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ನಾನು ಈಗ ಜೆಡಿಎಸ್ ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ನಾನು ತಟಸ್ಥನಾಗಿದ್ದೇನೆಂದು ಸಾ.ರಾ.ಮಹೇಶ್ ಹೇಳಿರುವ ಬಗ್ಗೆ ನನಗೇನು ಗೊತ್ತಿಲ್ಲ. ನಾವಿಬ್ಬರೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಜೆಡಿಎಸ್ ಪಕ್ಷದಲ್ಲಿ ನಾನು ತಟಸ್ಥನಾಗಿರುವುದು ಸತ್ಯ. ಪಕ್ಷದಲ್ಲಿ ನನಗೆ ತುಂಬಾ ನೋವಾಗಿದೆ. ಇದರಿಂದ ನನಗೆ ಸುಧಾರಿಸಿಕೊಳ್ಳಲು ಸಮಯಬೇಕು. ನೋವಿನಿಂದ ಹೊರಬರಲು ಸಮಯಬೇಕು. ಕಾರ್ಯಕರ್ತರನ್ನು ಬಿಡಲಿಕ್ಕೆ ಆಗುವುದಿಲ್ಲ. ಹೀಗಾಗಿ ಪಕ್ಷದಲ್ಲೆ ಇದ್ದೇನೆ ಎಂದು ಅವರು ತಿಳಿಸಿದರು.

ಪುತ್ರನ ಸ್ಪರ್ಧೆ ಇಲ್ಲ

‘ಅನರ್ಹ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ಕ್ಷೇತ್ರದಿಂದ ನನ್ನ ಪುತ್ರ ಸ್ಪರ್ಧಿಸುವುದಿಲ್ಲ. ವೈಯಕ್ತಿಕವಾಗಿ ನೋವಾಗಿರುವ ಕಾರಣ ಜೆಡಿಎಸ್ ನ ಸಕ್ರಿಯ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿದ್ದೇನೆ. ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆ ಆಗುವುದಿಲ್ಲ’

-ಜಿ.ಟಿ.ದೇವೇಗೌ ಜೆಡಿಎಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News