ರೈಲ್ವೆ ಯೋಜನೆಗಳ ಬಗ್ಗೆ ಸಿಎಂ-ರೈಲ್ವೆ ಸಚಿವರ ಚರ್ಚೆ

Update: 2019-09-09 18:19 GMT

ಬೆಂಗಳೂರು, ಸೆ.9: ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳು, ಬೆಂಗಳೂರು ಉಪ ನಗರ ರೈಲು ಹಾಗೂ ಮೆಟ್ರೋ ರೈಲು ಕಾಮಗಾರಿಗಳು ಮತ್ತು ಯೋಜನೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದರು.

ಶಿವಮೊಗ್ಗ ಹೊರ ವರ್ತುಲ ರಸ್ತೆ ಸಮೀಪ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಜಾಗ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆ ಬೆನ್ನೂರು ಹೊಸ ರೈಲ್ವೆ ಮಾರ್ಗದ ಆರಂಭಿಕ ಕೆಲಸಕ್ಕೆ ಒಪ್ಪಿಗೆ ನೀಡಲಾಗಿದೆ.

ಶಿವಮೊಗ್ಗ-ಯಶವಂತಪುರ ಇಂಟರ್ ಸಿಟಿ ರೈಲು ಸಂಚಾರ ಚೆನ್ನೈವರೆಗೆ ವಿಸ್ತರಣೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ-ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು.

ಶಿವಮೊಗ್ಗ ಮತ್ತು ಯಶವಂತಪುರ ನಡುವೆ ಸಂಚಾರ ಮಾಡುವ ಶತಾಬ್ದಿ ರೈಲಿನ ಸಮಯ ಬದಲಾವಣೆ ಕುರಿತು ಚರ್ಚಿಸಲಾಯಿತು. ಬೀರೂರು-ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್ ಕಾಮಗಾರಿ ಸಧ್ಯದಲ್ಲೇ ಆರಂಭಿಸಲು ಸೂಚನೆ ನೀಡಲಾಯಿತು.

ಬೆಂಗಳೂರು ಸಬರ್ಬನ್(ಉಪನಗರ) ರೈಲು ಯೋಜನೆ ಬಗ್ಗೆ ಚರ್ಚೆ ನಡೆಸಲಾಯಿತು. ಮೆಟ್ರೋ ಕಾಮಗಾರಿಗಳಿಗೆ ರೈಲ್ವೆ ಇಲಾಖೆಯು ಸಹಕರಿಸುವಂತೆ ಮನವಿ ಮಾಡಲಾಯಿತು.

ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News