ಸಂಘಪರಿವಾರ ಬಳಸುವ 'ಜೈ ಹಿಂದ್' ಘೋಷಣೆ ಮುಸ್ಲಿಮ್ ಸೇನಾನಿಯ ಕೊಡುಗೆ: ಡಾ.ಸಿ.ಎಸ್‌.ದ್ವಾರಕನಾಥ್

Update: 2019-09-14 16:23 GMT

ಬೆಂಗಳೂರು, ಸೆ.14: ಇಂದಿಗೂ ಸಹ ಸಂಘಪರಿವಾರ ಬಳಸುವ 'ಜೈ ಹಿಂದ್' ಘೋಷಣೆ ಓರ್ವ ಮುಸ್ಲಿಮ್ ಸೇನಾನಿ ನೀಡಿದ ಕೊಡುಗೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಬರಹಗಾರ ಡಾ.ಸಿ.ಎಸ್‌.ದ್ವಾರಕನಾಥ್ ನುಡಿದರು.

ಶನಿವಾರ ನಗರದ ದಾರುಸ್ಸಲಾಂ ಸಭಾಂಗಣದಲ್ಲಿ ಪರಸ್ಪರ ಬೆಂಗಳೂರು ಹಾಗೂ ಬಿ.ಎಂ.ಹನೀಫ್ ಓದುಗರ ಬಳಗ ಏರ್ಪಡಿಸಿದ್ದ, 'ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್' ಪುಸ್ತಕ ಬಿಡುಗಡೆ ಹಾಗೂ ಸೆಕ್ಯುಲರಿಸಂ ಮತ್ತು ರಾಷ್ಟ್ರೀಯತೆ ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಭಾಷರು ದೇಶಕ್ಕೆ ಕೊಟ್ಟ ರೋಮಾಂಚಕಾರಿ ಘೋಷಣೆ ಎಂದರೆ 'ಜೈ ಹಿಂದ್'. ಇವತ್ತಿಗೂ ಈ ಘೋಷಣೆ ನಮ್ಮ ರಾಷ್ಟ್ರೀಯತೆ ಪ್ರಕಟಿಸುವ ಹೆಮ್ಮೆಯ ವಿಧಾನವಾಗಿದೆ. ಆದರೆ, ಈ ಘೋಷಣೆಯನ್ನು ಸೃಷ್ಟಿಸಿದವರು ಸುಭಾಷರ ಕಾರ್ಯದರ್ಶಿಯಾಗಿದ್ದ 'ಝೈನುಲ್ ಅಬಿದೀನ್ ಹಸನ್' ಎಂದು ತಿಳಿಸಿದರು.

ನಾನು ಆರೆಸ್ಸೆಸ್ ನಲ್ಲಿದ್ದ ಸಂದರ್ಭದಲ್ಲಿ ಭಗತ್‍ ಸಿಂಗ್, ರಾಜಗುರು, ಸುಖದೇವ್ ಅವರನ್ನು ದೇಶಭಕ್ತಿಯ ಅಸ್ತ್ರಗಳಂತೆ ಬಿಂಬಿಸುತ್ತಿದ್ದರು. ಅವರಲ್ಲಿನ‌ ಜಾತ್ಯತೀತ ವಿಚಾರಗಳನ್ನು ಮರೆಮಾಚುತ್ತಿದ್ದರು. ಬಳಿಕ, ವಿವೇಕಾನಂದರನ್ನು ಎಳೆತಂದು‌ ಹಾಗೇಯೇ ಮಾಡಿದರು. ಈಗ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹಿಡಿದುಕೊಂಡಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ವಿವೇಕಾನಂದರ ಬಗ್ಗೆ ಕುವೆಂಪು ಅವರು ಬರೆದ 'ಶೂದ್ರ ಸನ್ಯಾಸಿ' ಪುಸ್ತಕದಿಂದಲೇ ನಮಗೆಲ್ಲ ನೈಜ ಸಂಗತಿಗಳು ತಿಳಿದುಬಂದವು ಎಂದ ಅವರು, ಲೇಖಕ ಬಿ.ಎಂ.ಹನೀಫ್ ಅವರು ಜಾತ್ಯತೀತ ವಿಚಾರಧಾರೆ ಗಳನ್ನು ಹೊರತರುವ ಸಣ್ಣ ಪ್ರಯತ್ನ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸತ್ಯ ಮತ್ತು ವಾಸ್ತವದಲ್ಲಿ ಮಾತನಾಡುವವರನ್ನು ಜಾತ್ಯಾತೀತರು ಎಂದು ಗುರಿಯಾಗಿಸುತ್ತಾರೆ. ಆದರೆ, ನಾವು ಸಂವಿಧಾನವಾದಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಡಾ.ಸಿ.ಎಸ್‌.ದ್ವಾರಕನಾಥ್ ನುಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಏಷ್ಯಾದಲ್ಲಿ ಮೊದಲ ಬಾರಿಗೆ ಸೈನ್ಯದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದ್ದು ಸುಭಾಷ್ ಚಂದ್ರ ಬೋಸ್. ಅಷ್ಟೇ ಅಲ್ಲದೆ, ಎಲ್ಲ ವರ್ಗದವರು ಅವರ ಸೈನ್ಯದಲ್ಲಿದ್ದರು ಎಂದು ಹೇಳಿದರು.

ಲೇಖಕ ಬಿ.ಎಂ.ಹನೀಫ್ ಮಾತನಾಡಿ, ಇತಿಹಾಸದಲ್ಲಿ ಅಡಗಿರುವ  ಜಾತ್ಯತೀತ ತತ್ವಗಳನ್ನು ಹೊರ ತರುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಕೃತಿ ರಚಿಸಲಾಗಿದ್ದು, ಇದು ಸರಣಿಯ ಮೊದಲ ಕೃತಿಯಾಗಿದ್ದು, ಒಟ್ಟು ಎಂಟು ಕೃತಿಗಳು ಬರಲಿವೆ ಎಂದು ತಿಳಿಸಿದರು.

ರಾಷ್ಟ್ರೀಯತೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗಾಗಿ, ಸಾಹಿತ್ಯದ ಮೂಲಕ ಬೆಳಕು ಚೆಲ್ಲಾಬೇಕಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ 'ಶಿವಾಜಿ ಮತ್ತು ಮುಸ್ಲಿಮರು', ಮುಹಮ್ಮದ್ ಅಲಿ ಜಿನ್ನಾ ಕೋಮುವಾದಿ ಕೃತಿಗಳು ಹೊರ ತರಲಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಬ್ಯಾಂಕಿಂಗ್ ತಜ್ಞ ಎಸ್. ಎಸ್.ಎ.ಖಾದರ್, ಲೇಖಕ ಡಾ.ಸಯ್ಯದ್ ಖಾಸೀಂ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News