ನೇತ್ರಾವತಿ ನದಿ ಬಳಿಯ ಅಕ್ರಮ ಕಟ್ಟಡ ತೆರವು: ಮಾನವೀಯತೆ ನೆಲೆಯಲ್ಲಿ 2 ಮನೆಗಳ ತೆರವಿಗೆ ತಾತ್ಕಾಲಿಕ ತಡೆ

Update: 2019-09-15 05:47 GMT

ಬಂಟ್ವಾಳ, ಸೆ.14: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯ ಹಳೇ ಸೇತುವೆ ಬಳಿಯಿದ್ದ 2 ಅಕ್ರಮ ಮನೆಗಳ ಕುಟುಂಬವು ತೆರವು ಮಾಡದಂತೆ ಅಧಿಕಾರಿಗಳ ಬಳಿ ಕೋರಿಕೊಂಡ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಯಲ್ಲಿ ಉಳಿಸಲಾಯಿತು. ಬಳಿಕ ಈ 2 ಕುಟುಂಬಗಳು ವಸತಿ ಯೋಜನೆಯಡಿ ನಿವೇಶನ ಹಾಗೂ ಸಹಾಯಕ್ಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿತು.

ಇಸ್ಮಾಯೀಲ್ ಕುಟುಂಬ: 1980ರಿಂದ ಈ ಜಾಗದಲ್ಲಿ ಮನೆಕಟ್ಟಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದೇನೆ. ಪುರಸಭೆಯ ಕಟ್ಟಡ ನಂಬರ್, ರೇಶನ್ ಕಾರ್ಡ್ ಕೂಡ ಇದೆ. ಅಂದಿನಿಂದ ವಿದ್ಯುತ್ ಬಿಲ್, ನೀರಿನ ಬಿಲ್, ಆಸ್ತಿ ತೆರಿಗೆಯನ್ನು ಪಾವತಿಸಲಾಗಿದೆ. ವಸತಿ ನಿವೇಶನದಡಿ ಈ ಜಾಗದಲ್ಲಿ ನಿವೇಶನ ನೀಡುವಂತೆ ಕೋರಿ ಕೆಲವು ವರ್ಷಗಳಿಂದ ಪುರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದ್ದೇನೆ. ಆದರೆ, ಮಾತಿನ ಮೂಲಕ ಸಮಾಧಾನ ಮಾಡಿ ಕಳುಹಿಸಲಾಗಿತ್ತೇ ಹೊರತು, ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಜೈನರಪೇಟೆಯ ನಿವಾಸಿ ಇಸ್ಮಾಯೀಲ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ನಮ್ಮ ಕಡೂ ಬಡಕುಂಟುಂಬ. ಹೀಗಿರುವ ಮನೆ ನೀವೆ ನೋಡಿ. ತನ್ನ ಪತ್ನಿ, 6 ಪುತ್ರಿಯರು ಹಾಗೂ ಇಬ್ಬರು ಪುತ್ರರೊಂದಿಗೆ ಇದರಲ್ಲಿಯೇ ವಾಸವಾಗಿದ್ದೇವೆ. ಹೊಟ್ಟೆ ಪಾಡಿಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳ ಸಹಾಯದಿಂದ ತಿಂಡಿ-ತಿನಿಸುಗಳನ್ನು ತಯಾರಿಸಿ, ಪೇಟೆಯ ಕ್ಯಾಂಟೀನ್‌ಗಳಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಈ ಮನೆ ತೆರವು ಮಾಡಿದರೆ, ನಮ್ಮ ಗತಿಯೇನು? ಎಂದು ಇಸ್ಮಾಯಿಲ್ ಕುಟುಂಬ ಕಣ್ಣೀರಿಟ್ಟಿತು.

ಅದಲ್ಲದೆ, ಮನೆಗೆ ತಾಗಿಕೊಂಡಿರುವ ಇನ್ನೊಂದು ಮನೆಯ ಭಾಗಶಃ ಹೆಂಚುಗಳನ್ನು ತೆರವು ಮಾಡಿದ್ದು, ಮಳೆಗಾಲದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಇದರಿಂದ ಭಯದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ನಿಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಈಗಲೇ ಇಲ್ಲಿಂದ ತೆರಳುವೆವು ಎಂದ ಅವರು, ಅಧಿಕಾರಿಗಳು ನಿವೇಶನ ಪಟ್ಟಿಗೆ ಹೆಸರು ಸೇರಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಅಸ್ಮತ್ ಕುಟುಂಬ: ತಾನು ಕಳೆದ 25 ವರ್ಷಗಳಿಂದ ವಾಸಿಸುತ್ತಾ ಬಂದಿದ್ದೇನೆ. ಬಳಿಕ ತನ್ನ ತಂಗಿಯ (ಅಸ್ಮತ್) ದಾಂಪತ್ಯ ಜೀವನದಲ್ಲಿ ಕಲಹ ಉಂಟಾದ ಹಿನ್ನೆಲೆಯಲ್ಲಿ ಆಕೆಗೆ ಈ ಮನೆಯನ್ನು ಬಿಟ್ಟುಕೊಡಲಾಗಿದೆ. ಈಕೆ 2 ಹೆಣ್ಣು ಮಕ್ಕಳು ಹಾಗೂ 1 ಪುತ್ರನೊಂದಿಗೆ ವಾಸವಾಗಿದ್ದಾಳೆ. ಬೀಡಿಕಟ್ಟಿ ಮನೆಯ ಖರ್ಚು ನಿಭಾಯಿಸುತ್ತಿದ್ದಾರೆ. ವಸತಿ ಯೋಜನೆಯಡಿ ನಿವೇಶನ ನೀಡುವಂತೆ ಸರ್, ಮೇಡಂರಲ್ಲಿ ಮನವಿ ಮಾಡಿದ್ದೇನೆ ಎಂದು ಅಸ್ಮತ್ ಅವರ ಸಹೋದರ ಅಬ್ದುಲ್ ಖಾದರ್ ಶರೀಫ್ ಪತ್ರಿಕೆ ಜೊತೆ ಸಂಕಷ್ಟ ತೋಡಿಕೊಂಡರು.

ಇಲ್ಲಿ ಹಲವಾರು ವರ್ಷಗಳಿಂದ ನಮ್ಮ ಹಿರಿಯ ಕುಟುಂಬಗಳು ವಾಸ ಮಾಡುತ್ತಾ ಬಂದಿವೆ. ತೆರವು ಮಾಡಿದ ನಿವೇಶನಕ್ಕೆ ಕಟ್ಟಡ ನಂಬರ್ ಕೂಡ ಇದೆ. ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಮಾಡಿದ್ದು ಸರಿಯಲ್ಲ. ಇದರ ಹಿಂದೆ ರಾಜಕೀಯ ಶಕ್ತಿ ಹಾಗೂ ಅಕ್ರಮ ಮರಳು ಮಾಫಿಯಾ ಕೈವಾಡ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ನದಿ ಪರಂಬೋಕ್ ಜಾಗ ಎಂದೂ ಹೇಳುತ್ತಿದ್ದರೂ ಇಲ್ಲಿನ ನದಿ ತೀರದ ಪಕ್ಕದಲ್ಲೇ ಇನ್ನು ಕೆಲವು ಕಟ್ಟಡ ನಿರ್ಮಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಬೇಕು. ವಸತಿ ರಹಿತರಿಗೆ ನಿವೇಶನ ಕಲ್ಪಿಸುವ ಪ್ರಯತ್ನ ಮಾಡಲಾಗುವುದು.

- ಇದ್ರೀಸ್ ಪಿ.ಜೆ., ಜೈನರಪೇಟೆ ವಾರ್ಡ್‌ನ ಪುರಸಭಾ ಸದಸ್ಯ

ಪುರಸಭಾ ವ್ಯಾಪ್ತಿಯ ನದಿ ಪರಂಬೋಕ್ ಜಾಗದಲ್ಲಿರುವ 16 ಮನೆಗಳ ಪೈಕಿ ಕಟ್ಟಡ ನಂಬರ್ 18-36/ಬಿ ಇಸ್ಮಾಯೀಲ್, 18-41/ಎ. ಅಬ್ದುಲ್ ಖಾದರ್ ಶರೀಫ್ ಎಂಬವರ ವಾಸ್ತವ್ಯವಿರುವ ಮನೆಗಳ ತೆರವಿನ ಬಗ್ಗೆ ಸ್ಥಳದಲ್ಲಿಯೇ ಎಸಿ ಅವರೊಂದಿಗೆ ಚರ್ಚೆ ಮಾಡಲಾಗಿತ್ತು. ಮಾನವೀಯತೆ ನೆಲೆಯಿಂದ ತೆರವು ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ವಸತಿ ರಹಿತರ ಪಟ್ಟಿಗೆ ಇವರನ್ನು ಸೇರಿಸುವುದರ ಜೊತೆಗೆ ವಸತಿ ವ್ಯವಸ್ಥೆ ಮಾಡಿದ ಬಳಿಕ ತೆರವು ಮಾಡಲಾಗುವುದು.
-ರೇಖಾ ಜೆ. ಶೆಟ್ಟಿ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News