ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ: 9 ಮಂದಿಯ ಬಂಧನ

Update: 2019-09-15 15:15 GMT

ಬೆಂಗಳೂರು, ಸೆ.15: ಪ್ರತಿಷ್ಠಿತ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. 

ನಗರದ ನಿವಾಸಿಗಳಾದ ಸ್ನೇಹಿಲ್, ಪವನ್ ಕುಮಾರ್, ನಿಶಾಂತ್, ಕುನಾಲ್ ಕುಮಾರ್ ಸಿಂಗ್, ಮುನೀಶ್, ನಿತಿನ್, ಟಿಂಕು ಮಂಡಲ್, ಕೌಶಲ್ ಕುಮಾರ್, ಸೀಜು ಡ್ಯಾನಿಯಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ದಂಧೆಯ ಮುಖ್ಯಸ್ಥನಾದ ಸೌರವ್ ರಂಜಿತ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳು ಜಾರ್ಖಂಡ್, ಪಶ್ಚಿಮ ಬಂಗಾಳ, ಕೇರಳ ಹಾಗೂ ಬಿಹಾರ ರಾಜ್ಯದವರಾಗಿದ್ದಾರೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ನಗರದ ಕಕ್ಸ್‌ಟೌನ್‌ನಲ್ಲಿರುವ ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು ಬಳಿ ಮೆರೀಟ್ ವೈಸ್ ಕನ್ಸಲ್ಟೆನ್ಸ್ ಕಚೇರಿ ಆರಂಭಿಸಿ, ರಾಜ್ಯದ ವಿವಿಧ ವೈದ್ಯಕೀಯ- ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಬಂಧಿತರಿಂದ 1 ಕಾರು, ಕಾಲೇಜುವೊಂದರ ಹೆಸರಿನಲ್ಲಿದ್ದ 1 ಲಕ್ಷದ ಡಿಡಿ, ಕಮಿಷನ್ ರೂಪದಲ್ಲಿ ಪಡೆದಿದ್ದ 1 ಲಕ್ಷ 80 ಸಾವಿರ ನಗದು, 11 ಮೊಬೈಲ್‌ಗಳು ಹಾಗೂ ವಿವಿಧ ಕಾಲೇಜುಗಳ ಪ್ರವೇಶದ ಕುರಿತ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News