ರಸ್ತೆ ಸುರಕ್ಷತಾ ಕ್ರಿಯಾ ಯೋಜನೆ ಕರಡು ಶೀಘ್ರ ಸಿದ್ಧ: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ

Update: 2019-09-23 16:13 GMT

ಬೆಂಗಳೂರು, ಸೆ. 23: ಎರಡು ದಿನಗಳೊಳಗಾಗಿ ಜಿಲ್ಲೆಯ ಇಲಾಖಾವಾರು ರಸ್ತೆ ಸುರಕ್ಷತಾ ಕ್ರಿಯಾ ಯೋಜನೆ ಕರಡು ಸಿದ್ಧಪಡಿಸಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಸಿದ್ಧಪಡಿಸಿರುವ ಜಿಲ್ಲಾ ರಸ್ತೆ ಸುರಕ್ಷತಾ ಕರಡು ಕ್ರಿಯಾ ಯೋಜನೆಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವ ಕುರಿತು ಚರ್ಚಿಸಲು, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ನೇತೃತ್ವದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಿ, ಪಾಲುದಾರಿಕೆ ಇಲಾಖೆಗಳು 2 ದಿನಗಳಲ್ಲಿ ಅಗತ್ಯವಿರುವ ಅನುದಾನದ ಬಗ್ಗೆ ಮಾಹಿತಿ ನೀಡಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಾರಿಗೆ ಉಪ ಆಯುಕ್ತ ಪ್ರಭುಸ್ವಾಮಿ, ಕ್ರಿಯಾ ಯೋಜನೆ ಕರಡು ಬಗ್ಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಬೇಕಾದ ಹಲವು ಚಟುವಟಿಕೆಗಳ ಪಟ್ಟಿ ಮಾಡಲಾಗಿದ್ದು, ಅನುಷ್ಠಾನಕ್ಕಾಗಿ ಆಯಾ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಸೂಕ್ತ ಆಯವ್ಯಯದ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಸೆ.25ರೊಳಗೆ ರಸ್ತೆ ಸುರಕ್ಷತಾ ಪ್ರಾಧಿಕಾರ ಜಿಲ್ಲೆಯ ಆಯವ್ಯಯ ಸಹಿತ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದ್ದು, ಈ ಸಂಬಂಧ ಸಭಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಆಡಳಿತ ಮತ್ತು ಮುಂದಾಳತ್ವ, ಜಿಲ್ಲೆಯಲ್ಲಿ ಆಗುತ್ತಿರುವ ರಸ್ತೆ ಅಪಘಾತ ವಿಶ್ಲೇಷಣೆ, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು, ಅಪಘಾತ ಮತ್ತು ತುರ್ತು ಚಿಕಿತ್ಸೆ, ರಸ್ತೆ ಸುರಕ್ಷತೆ ಕುರಿತು ಅನುಷ್ಠಾನ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು ಸೇರಿದಂತೆ ಮೇಲ್ವಿಚಾರಣೆ ಪರಿಶೀಲನೆ ಹಾಗೂ ನಿರಂತರ ಮೌಲ್ಯಮಾಪನ ನಡೆಸುವ ಬಗ್ಗೆ ಕೂಲಂಕಷವಾಗಿ ಕ್ರಿಯಾ ಯೋಜನೆಯಲ್ಲಿ ತಿಳಿಸಲಾಗಿದೆ.

ಸಂಚಾರ ನಗರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಕವಿತಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News