ಕಟ್ಟಡ ಕಾರ್ಮಿಕರಿಗೆ ಮೀಸಲಾದ ಹಣ ನೆರೆ ಪರಿಹಾರಕ್ಕೆ ಬಳಕೆ: ಸರಕಾರದ ಕ್ರಮ ಖಂಡಿಸಿ ನಾಳೆ ಪ್ರತಿಭಟನೆ

Update: 2019-09-24 16:23 GMT

ಬೆಂಗಳೂರು, ಸೆ.24: ಕಟ್ಟಡ ಕಾರ್ಮಿಕರಿಗಾಗಿ ಮೀಸಲಾಗಿರುವ ಹಣವನ್ನು ನೆರೆ ಪರಿಹಾರ ಹಾಗೂ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಸರಕಾರದ ಕ್ರಮವನ್ನು ಖಂಡಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಸೆ.25ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕಟ್ಟಡ ನಿರ್ಮಾಣದ ಕ್ಷೇತ್ರದ ಸಂಸ್ಥೆಗಳು, ಉದ್ಯಮಿಗಳಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ರೂಪದಲ್ಲಿ ಸಂಗ್ರಹಿಸಿದ ಮೊತ್ತ 8ಸಾವಿರ ಕೋಟಿ ರೂ.ನಿಧಿಯಲ್ಲಿದೆ. ಈ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳು, ಕಾರ್ಮಿಕರು ಹಾಗೂ ಅವರ ಮಕ್ಕಳ ಆರೋಗ್ಯ, ಶಿಕ್ಷಣದಂತಹ ಪ್ರಮುಖ ಹುದ್ದೇಶಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕಾರ್ಮಿಕರ ಹಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ರೂಪಿಸಿದ್ದರು. ಕಾರ್ಮಿಕರ ಮಕ್ಕಳಿಗಾಗಿ ಬೆಂಗಳೂರಿನಲ್ಲಿ 100ಪಾಲನಾ ಕೇಂದ್ರಗಳನ್ನೂ ತೆರೆಯುವ ಸಿದ್ಧತೆ ನಡೆಸಿದ್ದರು.

ಸಂಪರ್ಕ ಕೇಂದ್ರ, ಸಹಾಯವಾಣಿಗೆ ಪೂರಕ ತಂತ್ರಜ್ಞಾನ ಹಾಗೂ ಆ್ಯಪ್ ಅಭಿವೃದ್ಧಿಯ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದರು. ಈ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿಗಾಗಿ ಕಾರ್ಮಿಕರ ಕಲ್ಯಾಣ ನಿಧಿಯಿಂದ 3ಸಾವಿರ ಕೋಟಿ ರೂ.ನೀಡುವಂತೆ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳು ರೋಹಿಣಿ ಸಿಂಧೂರಿಗೆ ಒತ್ತಡ ಹಾಕಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News