ಅವ್ಯವಹಾರ ಆರೋಪ: ಬಿಬಿಎಂಪಿ ಬಿಜೆಪಿ ಸದಸ್ಯನ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2019-09-25 14:11 GMT

ಬೆಂಗಳೂರು, ಸೆ.25: ಅವ್ಯವಹಾರ ಆರೋಪ ಸಂಬಂಧ ಬಿಬಿಎಂಪಿ ಕಾಡು ಮಲ್ಲೇಶ್ವರ ವಾರ್ಡ್‌ನ ಬಿಜೆಪಿ ಸದಸ್ಯ ಮಂಜುನಾಥ್ ರಾಜು ವಿರುದ್ಧ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತರಿಗೆ ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ.

ಬುಧವಾರ ಇಲ್ಲಿನ ಎಂಎಸ್ ಕಟ್ಟಡದಲ್ಲಿರುವ ಲೋಕಾಯುಕ್ತ ಪ್ರಧಾನ ಕಚೇರಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ್ ಗೌಡ, ನೇತೃತ್ವದ ನಿಯೋಗ ಲೋಕಾಯುಕ್ತರಿಗೆ ದೂರು ನೀಡಿ ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರು ಘೋಷಿಸಿಕೊಂಡ ಆಸ್ತಿ ಹಾಗೂ ಹಣಕಾಸಿನ ವಹಿವಾಟಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದು ಕೂಡಲೇ ತನಿಖೆ ನಡೆಸುವಂತೆ ಆಗ್ರಹಿಸಿದರು.

ಕಳೆದ 2010 ರಲ್ಲಿ ಪಾಲಿಕೆ ಸದಸ್ಯರಾದ ಅವರ ಮಾಸಿಕ ಆದಾಯ 82,500 ವಾರ್ಷಿಕ ಆದಾಯ 9 ಲಕ್ಷದ 90 ಸಾವಿರ ಇದೆ. ಆದರೆ, 2015ರಲ್ಲಿ ವಾರ್ಷಿಕ ಆದಾಯ 2 ಕೋಟಿ 40 ಲಕ್ಷಕ್ಕೆ ಏರಿಕೆಯಾಗಿದೆ. ಇದನ್ನು ನೋಡಿದರೆ ಶೇ.20 ರಷ್ಟು ಹೆಚ್ಚಳವಾಗಿ ಅನುಮಾನಕ್ಕೆ ಕಾರಣವಾಗಿದೆ ಎಂದು ನಿಯೋಗ ದೂರಿನಲ್ಲಿ ಉಲ್ಲೇಖಿಸಿ ಆರೋಪಿಸಿದೆ.

ಮಂಜುನಾಥ ರಾಜು ಅವರ ಆದಾಯ ಹಾಗೂ ಹಣಕಾಸಿನ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಅನುಮಾನಗಳನ್ನು ನಿವಾರಿಸುವಂತೆ ನಿಯೋಗ ಲೋಕಾಯುಕ್ತರಿಗೆ ಮವಿನ ಮಾಡಿದೆ ಎಂದು ನಿಯೋಗದ ಸದಸ್ಯರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News