ಯುಎನ್‌ಐ ಸುದ್ದಿ ಸಂಸ್ಥೆಯ ಸಮಸ್ಯೆ ಒಂದೆರಡು ದಿನಗಳಲ್ಲಿ ಬಗೆಹರಿಸಲು ಕ್ರಮ: ಸಿಎಂ ಯಡಿಯೂರಪ್ಪ

Update: 2019-09-26 17:30 GMT
ಯುಎನ್ಐ ಸುದ್ದಿ ಸಂಸ್ಥೆಯ ಬೆಂಗಳೂರಿನ ನಿವೇಶನ ನವೀಕರಣ ಮಾಡಿಕೊಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೆಹಲಿಯ ಯುಎನ್‌ಐ ಮುಖ್ಯ ಸಂಪಾದಕ ಅಶೋಕ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಹಿರಿಯ ಪತ್ರಕರ್ತರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು

ಬೆಂಗಳೂರು, ಸೆ 26: ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ - ಯುಎನ್‌ಐ ಸುದ್ದಿ ಸಂಸ್ಥೆಗೆ ಬೆಂಗಳೂರಿನ ವಸಂತನಗರದಲ್ಲಿ ನೀಡಿರುವ ನಿವೇಶನದ ಗುತ್ತಿಗೆ ಅವಧಿಯನ್ನು ನವೀಕರಿಸುವ ವಿಚಾರದ ಬಗ್ಗೆ ಒಂದೆರಡು ದಿನಗಳಲ್ಲಿ ಕಡತ ತರಿಸಿ ಆದ್ಯತೆ ಮೇಲೆ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ದೆಹಲಿಯ ಯುಎನ್‌ಐ ಮುಖ್ಯ ಸಂಪಾದಕ ಅಶೋಕ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಹಿರಿಯ ಪತ್ರಕರ್ತರ ನಿಯೋಗ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಯಡಿಯೂರಪ್ಪ, ತಾವು ಯುಎನ್‌ಐ ಸುದ್ದಿ ಸಂಸ್ಥೆಯ ಪರವಾಗಿದ್ದು, ಸಂಸ್ಥೆಯ ಬೇಡಿಕೆಗಳನ್ನು ಪರಿಗಣಿಸುವುದಾಗಿ ಹೇಳಿದರು.

ಅಶೋಕ್ ಉಪಾಧ್ಯಾಯ ಮಾತನಾಡಿ, ಯುಎಎನ್‌ಐ ಸುದ್ದಿ ಸಂಸ್ಥೆ ಯಾವುದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ. ನ್ಯಾಯಾಂಗ ನಿಂದನೆ ಎಸಗಿಲ್ಲ. ಕೆಲವು ಅಧಿಕಾರಿಗಳು ತಮ್ಮನ್ನು ದಾರಿ ತಪ್ಪಿಸಿದ್ದಾರೆ. ಆರು ದಶಕಗಳ ಇತಿಹಾಸವಿರುವ ನಮ್ಮ ಸಂಸ್ಥೆಗೆ ಉದ್ಯೋಗಿಗಳೇ ಮಾಲೀಕರು. ಇದು ಟ್ರಸ್ಟ್ ಆಗಿದ್ದು, ಮಾಧ್ಯಮ ಕ್ಷೇತ್ರದ ಘನತೆ ಎತ್ತಿ ಹಿಡಿಯುವ ಸಂಸ್ಥೆಯಾಗಿದೆ. ಬಿಬಿಎಂಪಿ ಕೈಗೊಂಡ ತೀರ್ಮಾನದಿಂದ ಯುಎನ್‌ಐ ಸಿಬ್ಬಂದಿಗೆ ಬೀದಿಗೆ ಬಂದಿದ್ದಾರೆ. ದಯವಿಟ್ಟು ತಮ್ಮ ಮನವಿಯನ್ನು ಪರಿಗಣಿಸುವಂತೆ ಕೋರಿದರು.

ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ರಾಜನ್ ಅವರು ಮಾತನಾಡಿ, ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳಗೆ ತಾವು ಅವಕಾಶ ನೀಡಬಾರದು. ಎಲ್ಲವನ್ನೂ ಕೂಲಂಕುಶವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿದರು.

ಈ ಸಂದರ್ಭ ಯಡಿಯೂರಪ್ಪ, ಈ ಪ್ರಕರಣದ ಬಗ್ಗೆ ತಮಗೆ ಅರಿವಿದ್ದು, ತಕ್ಷಣವೇ ಕಡತ ತರಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಾಗ್ದಾನ ನೀಡಿದರು. ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಷರತ್ತುಗಳಿಗೆ ಒಳಪಟ್ಟು ಯುಎನ್‌ಐ ಸುದ್ದಿ ಸಂಸ್ಥೆಯ ಗುತ್ತಿಗೆ ಅವಧಿಯನ್ನು ನವೀಕರಣ ಮಾಡುವಂತೆ ತಾವು ಸಹ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿರುವುದಾಗಿ ಹಿರಿಯ ಪತ್ರಕರ್ತರ ನಿಯೋಗಕ್ಕೆ ತಿಳಿಸಿದರು.

ನಿಯೋಗದಲ್ಲಿ ಪ್ರಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ. ಪಿಟಿಐ ಬೆಂಗಳೂರು ವಿಭಾಗದ ಮುಖ್ಯಸ್ಥರಾದ ರಾಮನಾಥ ಶಣೈ, ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ, ಕೆ.ಜೆ.ವಾಸುಕಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News