ಬೆಂಗಳೂರು: ಎಟಿಎಂಗಳಿಗೆ ಹಣ ತುಂಬಿಸುವ ವಾಹನದ ಚಾಲಕ 99 ಲಕ್ಷ ರೂ. ಹಣದೊಂದಿಗೆ ಪರಾರಿ

Update: 2019-09-28 12:39 GMT

ಬೆಂಗಳೂರು, ಸೆ.28: ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ವಾಹನದ ಚಾಲಕನೊಬ್ಬ ಸಿನಿಮೀಯ ರೀತಿಯಲ್ಲಿ 99.14 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೈಟರ್ಸ್ ಏಜೆನ್ಸಿ ವಾಹನ ಚಾಲಕನಾಗಿದ್ದ ಪವನ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ.

ಶುಕ್ರವಾರ ಸಂಜೆ ಐಸಿಐಸಿಐ ಬ್ಯಾಂಕ್ ಶಾಖೆಯೊಂದರ ಕ್ಯಾಷಿಯರ್ ಆನಂದ್ ಎಂಬವರು ಎಟಿಎಂಗೆ ಹಣ ತುಂಬುವ ರೈಟರ್ಸ್ ಎಂಬ ಏಜೆನ್ಸಿ ವಾಹನದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತವನ್ನು ಟ್ರಂಕ್‌ಗಳಲ್ಲಿಟ್ಟುಕೊಂಡು ವಿವಿಧ ಎಟಿಎಂಗಳಿಗೆ ಹಣ ತುಂಬಿ, ನಂತರ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಐಸಿಐಸಿಐ ಎಟಿಎಂಗೆ ಬಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಏಜೆನ್ಸಿ ವಾಹನದ ಚಾಲಕ ಮಂಡ್ಯ ಮೂಲದ ಪವನ್, ಸಿಬ್ಬಂದಿಗಳಾದ ರೆಡ್ಡಿಬಾಬು, ದಯಾನಂದ್, ಮುಖೇಶ್ ಸೇರಿಕೊಂಡು ಆನಂದ್ ಮೇಲೆ ಹಲ್ಲೆ ನಡೆಸಿ 20 ಲಕ್ಷ ಹಣವಿದ್ದ ಪೆಟ್ಟಿಗೆಯನ್ನು ಮಾತ್ರ ಸ್ಥಳದಲ್ಲೇ ಬಿಟ್ಟು ಉಳಿದ 99.14 ಲಕ್ಷ ರೂ. ಟ್ರಂಕ್‌ಗಳೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ರೆಡ್ಡಿಬಾಬು, ದಯಾನಂದ್, ಮುಖೇಶ್ ವಾಹನದಿಂದ ಇಳಿದು ಪರಾರಿಯಾಗಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದಿದ್ದಾರೆ. ಆದರೆ, ವಾಹನದ ಚಾಲಕ ಪವನ್ ಹಣ ಸಮೇತ ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಶೋಧ: ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ವಾಹನ ಮಾತ್ರ ಪತ್ತೆಯಾಗಿದೆ. ಎಟಿಎಂ ಕೇಂದ್ರ ಹಾಗೂ ವಾಹನ ಬಿಟ್ಟುಹೋದ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಪವನ್ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News