ಕುಟುಂಬದವರನ್ನು ರಾಜಕೀಯಕ್ಕೆ ತಂದು ಇಂದಿರಾ ಗಾಂಧಿ ತಪ್ಪು ಮಾಡಿದರು: ಮಾಜಿ ಸ್ಪೀಕರ್ ರಮೇಶ್‌ ಕುಮಾರ್

Update: 2019-09-28 17:07 GMT

ಬೆಂಗಳೂರು, ಸೆ.28: ಇವತ್ತಿನ ರಾಜಕೀಯ ಪಕ್ಷಗಳು ದೇಶದ ಸಮಸ್ಯೆಯನ್ನು ಬಗೆಹರಿಸುವ ಬದಲು ಆಂತರಿಕ ಕಲಹದಲ್ಲೇ ಮುಳುಗಿವೆ. ಯಾವ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಉಳಿದುಕೊಂಡಿಲ್ಲವೆಂದು ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ವಿಷಾದಿಸಿದರು.

ಶನಿವಾರ ಭಾರತ ಯಾತ್ರಾ ಕೇಂದ್ರ, ಬಯಲು ಪರಿಷತ್ ಸಹಯೋಗದೊಂದಿಗೆ ಹರಿವಂಶ್ ಮತ್ತು ರವಿದತ್ತ ವಾಜಪೇಯಿ ಬರೆದಿರುವ ‘ಚಂದ್ರಶೇಖರ್ ದಿ ಲಾಸ್ಟ್ ಐಕಾನ್ ಆಫ್ ದಿ ಐಡಿಯಾಲಾಜಿಕಲ್ ಪಾಲಿಟಿಕ್ಸ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಕಾಣೆಯಾಗಿದೆ. ಇಂದು ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷದಲ್ಲೂ ಇದು ಉಳಿದುಕೊಂಡಿಲ್ಲ. ಜನಪ್ರತಿನಿಧಿಗಳಿಗೆ ಎರಡು ಮುಖವಿದೆ. ಒಂದು ರಾಜಕೀಯಕ್ಕೆ ಮತ್ತೊಂದು ಸಾರ್ವಜನಿಕರ ತೋರ್ಪಡಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ವ್ಯಂಗ್ಯವಾಡಿದರು.

ಇಂದಿರಾ ಗಾಂಧಿ ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರುವ ಮೂಲಕ ತಪ್ಪು ಮಾಡಿದರು. ಅದೇ ತಪ್ಪನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಅಷ್ಟೆ. ಜನರ ನಾಡಿಮಿಡಿತ ಅರಿಯದ ನಾವು ವೈಯಕ್ತಿಕ ಟೀಕೆಗಳಲ್ಲಿ ತೊಡಗಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಮೊದಲ ಲೋಕಸಭಾ ಚುನಾವಣೆಯಲ್ಲಿ 489 ಸೀಟುಗಳ ಪೈಕಿ ಕಾಂಗ್ರೆಸ್ 364 ಸೀಟು ಗೆಲುವು ಸಾಧಿಸಿತ್ತು. ಭಾರತೀಯ ಜನಸಂಘ ಕೇವಲ 3 ಸೀಟು ಪಡೆದಿತ್ತು. ಇದೇ ರೀತಿ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿ ಹೊರ ಹೊಮ್ಮುತ್ತಿತ್ತು. 4ನೇ ಚುನಾವಣೆಯಲ್ಲಿ 520 ಸೀಟುಗಳಿಗೆ ಕಾಂಗ್ರೆಸ್‌ಗೆ 283 ಸೀಟು ಮತ್ತು ಬಿಜೆಪಿ 79 ಸೀಟುಗಳನ್ನು ಪಡೆದುಕೊಂಡಿತ್ತು. ಎಡಪಂಥೀಯ ಸಿದ್ಧಾಂತದ ಕಡೆ ಒಲವಿದ್ದ ಜನರು ಕ್ರಮೇಣ ಬಲಪಂಥೀಯ ಕಡೆ ವಾಲಿದರು. ಇದಕ್ಕೆ ಬಿಜೆಪಿಯೇತರ ಜನಪ್ರತಿನಿಧಿಗಳೇ ಕಾರಣವೆಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಚಂದ್ರಶೇಖರ್ ಕಾಂಗ್ರೆಸ್ ಸೇರಿ ಅಲ್ಲಿನ ಸಿದ್ಧಾಂತವನ್ನು ಬದಲು ಮಾಡಲು ಹೊರಟರು. ಆನಂತರ ಪಕ್ಷದ ಕೆಲವು ನಿಲುವುಗಳನ್ನು ವಿರೋಧಿಸಿದರು. ಸಚಿವ ಸಂಪುಟಕ್ಕೆ ಸೇರಬೇಕಿದ್ದ ಅವರು ಜೈಲು ಸೇರಿದರು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತಿದ್ದ ಒಬ್ಬ ಸಮಾಜವಾದಿ ಚಂದ್ರಶೇಖರ್ ಜೀವನ ಯುವಕರಿಗೆ ಸ್ಫೂರ್ತಿಯಾಗಲಿದೆ. ಆದರೆ, ಇವರನ್ನು ಮಾದ್ಯಮದವರು ಕಳ್ಳನಾಯಕನ ರೀತಿ ತೋರಿಸಿದರು ಎಂಬುದೇ ಬೇಸರದ ಸಂಗತಿಯೆಂದು ಅವರು ವಿಷಾದಿಸಿದರು.

ಏಕೆ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ

ಕೇಂದ್ರ ಸರಕಾರ ಬ್ಯಾಂಕಿನಿಂದ 17 ಲಕ್ಷ ಕೋಟಿ ರೂ.ಸಾಲ ಪಡೆದು ಮರುಪಾವತಿ ಮಾಡದ ಉದ್ಯಮಿ, ಜನಪ್ರತಿನಿಧಿಗಳ ಪಟ್ಟಿಯನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ. ಆ ಪಟ್ಟಿಯಲ್ಲಿ ನಮ್ಮ ಪಕ್ಷದವರೂ ಇದ್ದರೆ ಅವರನ್ನು ಜೈಲಿಗೆ ಕಳುಹಿಸಿ. ಜೈಲಿಗೆ ಹೋಗಲು ನಾನು ರೆಡಿ ಇದ್ದೇನೆ. ಸಂವಿಧಾನ ಬದ್ಧವಾಗಿ ಬಿಜೆಪಿ ಅಧಿಕಾರ ಸ್ವೀಕಾರ ಮಾಡಿದೆ. ನಾವು ಅದನ್ನು ಗೌರವಿಸಬೇಕು. ನಮ್ಮ ತಾತ್ವಿಕ ಹೋರಾಟ ಇದೇ ರೀತಿ ಮುಂದುವರೆಯಲಿದೆ.

-ರಮೇಶ್‌ ಕುಮಾರ್, ಮಾಜಿ ಸ್ಪೀಕರ್

ಹೌದು ನಾನು ಕಳ್ಳನೆ

ರಮೇಶ್ ಕುಮಾರ್ ಕಳ್ಳ ಎಂಬ ಮಾಜಿ ಸಂಸದ ಮುನಿಯಪ್ಪ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಹೌದು ನಾನು ಕಳ್ಳನೇ. ಅವರ ಹೇಳಿಕೆಗಳು, ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಜನರ ಜ್ವಲಂತ ಸಮಸ್ಯೆಗಳು ಸಾಕಷ್ಟಿವೆ. ಎಷ್ಟು ದಿನ ಬದುಕಿರುತ್ತೇನೆಯೋ ಗೊತ್ತಿಲ್ಲ, ಇರುವಷ್ಟು ದಿನ ಜನರ ಕೆಲಸ ಮಾಡುತ್ತೇನೆ. ನಾನು ಕಳ್ಳನೇ, ಹೋಗಿ ದೂರು ಕೊಡಲು ಹೇಳಿ ಎಂದು ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News