ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ದೇಶದಲ್ಲಿಯೇ ಉತ್ತಮ: ಪ್ರೊ.ಕೆ.ಆರ್.ಎಸ್.ಮೂರ್ತಿ

Update: 2019-09-29 16:38 GMT

ಬೆಂಗಳೂರು, ಸೆ.29: ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯು ಇಂದಿನ ಯುವ ಪೀಳಿಗೆಯವರಿಗೆ ಕಾನೂನು ಶಿಕ್ಷಣ ನೀಡಲು ಮೀಸಲಾಗಿದ್ದು, ಉತ್ತಮ ಶಾಲೆಗಳಲ್ಲೇ ಮೊದಲನೆ ಶಾಲೆಯಾಗಿದೆ ಎಂದು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ನಿರ್ದೇಶಕ ಪ್ರೊ.ಕೆ.ಆರ್.ಎಸ್. ಮೂರ್ತಿ ಹೇಳಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವತಿಯಿಂದ ಏರ್ಪಡಿಸಿದ್ದ 27 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾನೂನು ಶಿಕ್ಷಣ ನೀಡುವುದರಲ್ಲಿ ಈ ಶಾಲೆಯು ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದು ಪ್ರತಿಪಾದಿಸಿದರು.

ಅಹಮದಾಬಾದ್‌ನಲ್ಲಿ 1960 ರಿಂದ ಆರಂಭವಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಅಮೆರಿಕ ದೇಶದಲ್ಲಿರುವ ಬ್ಯುಸಿನೆಸ್ ಶಾಲೆಯಂತೆಯೇ ಉತ್ತಮ ಶಿಕ್ಷಣ ಹೊಂದಿರುವ ಯುವ ಮ್ಯಾನೇಜರ್‌ಗಳನ್ನು ಸಿದ್ಧಪಡಿಸುತ್ತಿರುವುದರಿಂದ ದೇಶದ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದರು.

ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ನೀವು ಭಷ್ಯದಲ್ಲಿ ಹೇಗೆ ಮುಂದೆ ಬರುತ್ತೀರಾ ಎಂಬುದು ಇನ್ನು ನಿಮ್ಮ ಕೈಯಲ್ಲಿ ಇದೆ. ಸಹಾನುಭೂತಿ, ವಿನಯ, ಮತ್ತು ಸೇವಾ ಚೈತನ್ಯ ಮೂರು ಮೌಲ್ಯಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಿ. ಇವು ನಿಮ್ಮಲ್ಲಿದ್ದರೆ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ನುಡಿದರು.

ಭಾರತೀಯ ಬಾರ್ ಕೌನ್ಸಿಲ್‌ನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಮಾತನಾಡಿ, ಕಾನೂನು ಶಾಲೆಯಿಂದ ಶಿಕ್ಷಣ ಪಡೆದಿರುವ ನೀವು ತುಂಬಾ ಬುದ್ಧಿವಂತರಾಗುತ್ತೀರಾ. ಜಗತ್ತಿನಲ್ಲಿ ಏನೇ ಅನ್ಯಾಯ ನಡೆದರೂ ಅದರ ವಿರುದ್ಧ ನೀವು ನಿಲ್ಲಬೇಕು. ನೀವೇ ಮುಂದಿನ ಕಾನೂನು ರಚನಾಕಾರರು. ಸಮಾಜದಲ್ಲಿ ವಕೀಲರಿಗೆ ಗೌರವವಿದೆ, ಹಾಗಾಗಿ ಭಷ್ಯದಲ್ಲಿ ಎಂದಿಗೂ ತಪ್ಪಿತಸ್ಥರ ವಿರುದ್ಧ ವಾದಿಸಬೇಡಿ ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ನ್ಯಾಯಧೀಶರಾದ ನ್ಯಾಯಮೂರ್ತಿ ಶರದ್ ಅರಂದ ಬೊಬ್ಡೆ ಕಾನೂನು ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ. ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ಸೇರಿದಂತೆ ಹಲವರಿದ್ದರು.

ಘಟಿಕೋತ್ಸವದಲ್ಲಿ 11 ಚಿನ್ನದ ಪದಕಗಳನ್ನು ಪಡೆದ ಬಿಎಎಲ್‌ಎಲ್‌ಬಿ ಆನರ್ಸ್‌ ಪದವೀಧರೆ ಮಾಧವಿ ಸಿಂಗ್‌ರನ್ನು ಗೌರವಿಸಲಾಯಿತು. ಇದೇ ವೇಳೆ ಮೇಘಾ ಹೇಮಂತ್ ಮೇಹ್ತಾ 6 ಚಿನ್ನದ ಪದಕ ಹಾಗೂ ಪವನ್ ಶ್ರೀನಿವಾಸ್ 4 ಚಿನ್ನದ ಪದಕಗಳನ್ನು ಪಡೆದಿದ್ದು, ಅವರನ್ನು ಗೌರವಿಸಲಾಯಿತು. ಹಾಗೂ ಡಾಕ್ಟರೇಟ್ ಪದವಿಯಲ್ಲಿ 10 ಹಾಗೂ ವ್ಯವಹಾರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯ 167 ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಪದವಿ ಹಾಗೂ ಸೈಬರ್ ಕಾನೂನು ಮತ್ತು ಸೈಬರ್ ಫೊರೆನಿಕ್ಸ್ ಸ್ನಾತಕೋತ್ತರ ಡಿಪ್ಲೊಮಾದ 545 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News