ಪ್ಲಾಸ್ಟಿಕ್ ಹೂಗಳ ಆಮದು ನಿಷೇಧಕ್ಕೆ ಆಗ್ರಹಿಸಿ ಬೆಳೆಗಾರರ ಪ್ರತಿಭಟನೆ

Update: 2019-09-29 17:34 GMT

ಬೆಂಗಳೂರು ಸೆ.29: ಚೈನಾದಿಂದ ಪ್ಲಾಸ್ಟಿಕ್ ಹೂಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಬೇಕು ಹಾಗೂ ಹೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಚೈನಾ ಪ್ಲಾಸ್ಟಿಕ್ ಹೂಗಳ ಬಳಕೆ ರಾಜ್ಯದ ಹೂ ಬೆಳೆಗಾರರನ್ನು ದಿನನಿತ್ಯದ ಜೀವನವನ್ನು ತೊಂದರೆಗೆ ತಳ್ಳಿದೆ. ಹೀಗಾಗಿ, ಅವುಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ನೂರಾರು ಬೆಳೆಗಾರರಿಂದು ನಗರದ ಲಾಲ್‌ಬಾಗ್ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹಪಡಿಸಿದರು.

ಸುಮಾರು 10 ಲಕ್ಷ ಮೌಲ್ಯದ ಹೂಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚುವ ಮೂಲಕ ಜನರಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಟುರಿಣಾಮಗಳು ಹಾಗೂ ರೈತರಿಗೆ ಆಗುವ ಅನ್ಯಾಯವನ್ನು ಅರಿವು ಮೂಡಿಸಲುವ ಪ್ರಯತ್ನ ಮಾಡಿದರು.

ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೂ ಬೆಳೆಗಾರರು ಸುಮಾರು 5850 ಏಕರೆಯಷ್ಟು ಪಾಲಿಹೌಸ್‌ಗಳ ಮೂಲಕ ಗುಲಾಬಿ, ಗೆರ್ಬೆರಾ, ಕಾರ್ನೇಷನ್ಸ್, ಕ್ರೈಸಾಂಥಿಮಮ್, ಸ್ಪ್ರೇ ರೋಸಸ್ ಸೇರಿದಂತೆ 25 ಕ್ಕೂ ಅಧಿಕ ಬಗೆಯ ಹೂಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಇದರ ಮೇಲೆ ಅವಲಂಬಿತವಾಗಿದೆ. ಅಲ್ಲದೆ, ರಾಜ್ಯದಲ್ಲಿ 2.8 ಲಕ್ಷ ಎಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಸಂಪಂಗಿ, ಕನಕಾಂಬರ ಸೇರಿದಂತೆ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಇದರ ಮೇಲೆ ಅವಲಂಬಿತರಾಗಿರುವ ಜನರ ಸಂಖ್ಯೆ 52 ಲಕ್ಷದಷ್ಟಿದೆ. ಇದೀಗ ಪ್ಲಾಸ್ಟಿಕ್ ಹೂಗಳ ಆಮದಿನಿಂದ ಇವರ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಚೈನಾದಿಂದ ಆಮದಾಗುತ್ತಿರುವ ಕೃತಕ ಪ್ಲಾಸ್ಟಿಕ್ ಹೂಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು 2019 ಸೇ ಸಾಲಿನಲ್ಲಿ ಶೇ.92 ರಷ್ಟಿದೆ. ಹೀಗೆ ಮುಂದುವರಿದರೆ, 2022 ವೇಳೆಗೆ ಈ ಪ್ರಮಾಣ ಶೇ.250ಕ್ಕೆ ತಲುಪಲಿದ್ದು, ಹೂಗಳ ಮಾರಾಟ ಬೆಲೆಯಲ್ಲಿ ಶೇ.55 ರಷ್ಟು ಕುಸಿತವಾಗಲಿದೆ. ಇದರಿಂದ ಹೂ ಬೆಳೆಯುವ ರಾಜ್ಯಗಳಲ್ಲಿ ಬೆಳೆಗಾರರಿಗೆ ಭಾರಿ ಪ್ರಮಾಣದ ಪೆಟ್ಟು ಬೀಳಲಿದೆ ಎಂದು ಅವರು ವಿವರಿಸಿದರು.

ಪರಿಸರಕ್ಕೆ ಹಾನಿ: ಪ್ಲಾಸ್ಟಿಕ್ ಬಳಸಿ ತಯಾರಿಸಿರುವ ಕೃತಕ ಹೂಗಳು ಸುಲಭವಾಗಿ ಕೊಳೆಯುವಂತಹವಲ್ಲ. ಕಾಲಕ್ರಮೇಣ ಭೂಮಿಗೆ ಹಾಗೂ ನೀರಿಗೆ ಸೇರಿ ಪರಿಸರವನ್ನು ಹಾಳುಗೆಡವುತ್ತವೆ.

ಮಾನಸಿಕ ದುಷ್ಪರಿಣಾಮ: ನೈಸರ್ಗಿಕ ಹೂಗಳಿಂದ ಬರುವ ವಾಸನೆಯನ್ನು ಯಾರು ನಕಲು ಮಾಡಲಿಕ್ಕಾಗುವುದಿಲ್ಲ. ಈ ಕೃತಕ ಹೂಗಳಲ್ಲಿ ಆ ಅಂಶಗಳಿಲ್ಲದೆ ಹೂಗಳು ನೀಡುವ ಸಾಂತ್ವಾನ ಹಾಗೂ ಒತ್ತಡ ನಿವಾರಣೆಯ ಪರಿಣಾಮ ಸಿಗುವುದಿಲ್ಲ. ಪ್ರತಿವರ್ಷ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದ್ದು, ನೈಸರ್ಗಿಕ ಹೂಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು ಹೂ ಬೆಳೆಗಾರರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಗರದ ಲಾಲ್‌ಬಾಗ್‌ನ ಎಲ್ಲ ದ್ವಾರಗಳಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದ ಹೂ ಬೆಳೆಗಾರರು ಜಮಾಯಿಸಿ, ತಾವು ಬೆಳೆದ ಹೂಗಳನ್ನು ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ನೀಡುವ ಮೂಲಕ ಕೃತಕ ಹೂಗಳು ಬಳಸದಂತೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News