ಕೆಪಿಪಿಸಿ ಅಧ್ಯಕ್ಷರ ಬಗ್ಗೆ ಹೇಳಿಕೆಗೆ ಖಂಡನೆ: ಅನರ್ಹ ಶಾಸಕರ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2019-09-30 13:07 GMT

ಬೆಂಗಳೂರು, ಸೆ.30: ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅನರ್ಹ ಶಾಸಕರು ಟೀಕೆ ಮಾಡಿರುವುದನ್ನು ಖಂಡಿಸಿದ ಬಿಬಿಎಂಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ವೌರ್ಯ ವೃತ್ತದ ಬಳಿ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು, ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷದಿಂದ ಶಾಸಕ ಸ್ಥಾನಗಳಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಈಗ ಪಕ್ಷದ ತೊರೆಯುವುದು ಎಷ್ಟರ ಮಟ್ಟಿಗೆ ಸರಿ. ಅವರನ್ನು ಪಕ್ಷದ್ರೋಹಿ ಎನ್ನುವುದು ತಪ್ಪಲ್ಲ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಸೋಮಶೇಖರ್ ಅವರಿಗೆ ಕಾಂಗ್ರೆಸ್ ಪಾಠ ಕಲಿಸಲಿದೆ. ಅಲ್ಲದೆ, ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕೆ ಹಾಕುವ ಯತ್ನ ನಡೆದಿದ್ದು, ಬಿಬಿಎಂಪಿ ವಿವಿಧ ಯೋಜನೆಗಳ ಅನುದಾನ ಕಡಿತ ಮಾಡಿದ್ದು ಸರಿಯಲ್ಲ ಎಂದು ಆರೋಪಿಸಿದರು.

ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಎಸ್.ಟಿ.ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಅಸಂವಿಧಾನಿಕ ಪದ ಬಳಸಿದ್ದು ಸರಿಯಲ್ಲ. ಮೊದಲು ತಾವು ಯಾವ ಸ್ಥಿತಿಯಲ್ಲಿದ್ದೀರಿ ಎನ್ನುವುದನ್ನು ನೋಡಿ ಕೊಳ್ಳಬೇಕು. ಅಲ್ಲದೆ, ಅವರಿಗೆ ಕಾಂಗ್ರೆಸ್ ಸತತ 5 ಬಾರಿ ಟಿಕೆಟ್ ನೀಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಎರಡನೇ ಬಾರಿ ಶಾಸಕರಾಗಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ತಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತೆಗೆದುಕೊಂಡು ಹೋದ ಸೋಮಶೇಖರ್ ಇಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಕುರಿತು ಟೀಕೆ ಮಾಡುತ್ತಿರುವುದು ನಾಚಿಕೆಗೇಡು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಆರ್.ಎಸ್.ಸತ್ಯನಾರಾಯಣ್, ಲತಾ ರಾತೋಡ್, ಬಿ.ಮೋಹನ್ ಕುಮಾರ್, ಶಿವರಾಜ್ ಸೇರಿದಂತೆ ಪ್ರಮುಖರಿದ್ದರು.

ಕ್ಷಮೆಯಾಚಿಸಲು ಒತ್ತಾಯ

ದಿನೇಶ್ ಗುಂಡೂರಾವ್ ವಿರುದ್ಧ ಟೀಕೆ ಖಂಡಿಸಿ ಸೋಮವಾರ ನಗರದ ಮೌರ್ಯ ವೃತ್ತದ ಬಳಿ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಎಸ್.ಟಿ.ಸೋಮಶೇಖರ್ ಕ್ಷಮೆಯಾಚಿಸುವಂತೆ ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಚಾರ ಸಮಿತಿಯ ಜಿ.ಜನಾರ್ದನ್, ಹಲವು ಸೌಲಭ್ಯಗಳನ್ನು ಪಡೆದ ಅನರ್ಹ ಶಾಸಕರು, ಇಂದು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ, ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯಸಿಂಹ, ಎ.ಆನಂದ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News