ಮೈಸೂರುವರೆಗೆ ವಿಸ್ತರಿಸಲ್ಪಟ್ಟ ಕೊಚುವೆಲಿ ಎಕ್ಸ್‌ಪ್ರೆಸ್‌ಗೆ ಚಾಲನೆ

Update: 2019-09-30 17:42 GMT

ಬೆಂಗಳೂರು, ಸೆ.30: ಬೆಂಗಳೂರ, ರಾಮನಗರ, ಮಂಡ್ಯ ಮತ್ತು ಮೈಸೂರಿನ ಜನರ ನಿರಂತರ ಆಗ್ರಹಕ್ಕೆ ಸ್ಪಂದಿಸಿರುವ ನೈಋತ್ಯ ರೈಲ್ವೇ ಕೊಚುವೆಲಿ-ಕೆಎಸ್‌ಆರ್ ಬೆಂಗಳೂರು-ಕೊಚುವೆಲಿ ಎಕ್ಸ್‌ಪ್ರೆಸನ್ನು ಮೈಸೂರುವರೆಗೆ ವಿಸ್ತರಿಸಿದ್ದು ಇದರ ವಿಶೇಷ ಉದ್ಘಾಟನೆ ಸೋಮವಾರ ಮೈಸೂರು ರೈಲ್ವೇ ನಿಲ್ದಾಣದಲ್ಲಿ ನಡೆಯಿತು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರೈಲ್ವೇ ಸಚಿವ ಸುರೇಶ್ ಸಿ. ಅಂಗಡಿ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಗೃಹ ನಿರ್ಮಾಣ ಸಚಿವ ಮತ್ತು ಮೈಸೂರಿನ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್, ಚಾಮರಾಜನಗರ ಶಾಸಕ ನಿರಂಜನ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಕೊಚುವೆಲಿ-ಕೆಎಸ್‌ಆರ್ ಬೆಂಗಳೂರು-ಕೊಚುವೆಲಿ ಎಕ್ಸ್‌ಪ್ರೆಸನ್ನು ಮೈಸೂರಿನವರೆಗೆ ವಿಸ್ತರಣೆಗೊಳಿಸಿರುವುದರಿಂದ ಮೈಸೂರು ಹಾಗೂ ತಮಿಳುನಾಡು ಮತ್ತು ಕೇರಳದ ಹಲವು ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಒದಗಿದಂತಾಗಿದೆ. ತನ್ನ ಹಾದಿಯಲ್ಲಿ ಈ ಎಕ್ಸ್‌ಪ್ರೆಸ್ ಸೇಲಂ, ಈರೊಡ್, ಕೊಯಂಬತ್ತೂರು, ಪಾಲ್ಗಾಟ್, ಅಳಪುಝ ಮತ್ತು ಕ್ವಿಲೊನ್‌ನಲ್ಲಿ ನಿಲ್ಲಲಿದೆ. ಇದರಿಂದ ಮೈಸೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೆಲೆಸಿರುವ ಕೇರಳಿಗರಿಗೆ ತಮ್ಮ ನಗರಗಳಿಗೆ ತಲುಪಲು ಸುಲಭವಾಗಲಿದೆ.

ಉದ್ಘಾಟನೆ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ರೈಲ್ವೇಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಹಬ್ಬದ ಸಮಯದಲ್ಲಿ ಕರ್ನಾಟಕದ ಪ್ರಯಾಣ ಬೇಡಿಕೆಯನ್ನು ಪುರಸ್ಕರಿಸಿದ ರೈಲ್ವೇ ಸಚಿವಾಲಯಕ್ಕೆ ಧನ್ಯವಾದ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ರೈಲ್ವೇ ಅಭಿವೃದ್ಧಿಗಾಗಿ ನಿಧಿ ಬಿಡುಗಡೆ ಮಾಡಿರುವ ಕಾರಣಕ್ಕೂ ಮುಖ್ಯಮಂತ್ರಿಗಳು ರೈಲ್ವೇ ಇಲಾಖೆಯನ್ನು ಶ್ಲಾಘಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ರೈಲು ಹಾದಿಯನ್ನು ವಿಸ್ತರಣೆಗೊಳಿಸಿರುವುದರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News