ನೆರೆ ಸಂತ್ರಸ್ತರ ಸಹಾಯಕ್ಕೆ ಬಾರದ ಸಂಸದರ ಆಯ್ಕೆ ಮಾಡಿದ್ದಕ್ಕೆ ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳಬೇಕು

Update: 2019-10-03 13:03 GMT

ಬೆಂಗಳೂರು, ಅ.3: ನೆರೆಯಿಂದಾಗಿ ಇಡೀ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಾರದ ಸಂಸದರನ್ನು ಆಯ್ಕೆ ಮಾಡಿದ ನಾವು ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡದ ಸರಕಾರದ ಕ್ರಮ ಖಂಡಿಸಿ ನಗರದಲ್ಲಿಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೆಂದೂ ಕಾಣದ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ನೂರಾರು ಸಂತ್ರಸ್ತರು ಬೀದಿಪಾಲಾಗಿದ್ದಾರೆ ಎಂದರು.

ಕಳೆದ 70 ವರ್ಷಗಳಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ಉತ್ತರ ಕರ್ನಾಟಕ ಜನರು ಪ್ರವಾಹದಿಂದ ನಲುಗಿ ಹೋಗಿದ್ದಾರೆ. ಪ್ರವಾಹವಾಗಿ 60 ದಿನಗಳು ಕಳೆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ಇಷ್ಟು ದಿನಗಳು ಕಳೆದರೂ ಪರಿಹಾರ ನೀಡದೆ ಕೇಂದ್ರ ಸರಕಾರ ಏನು ಮಾಡುತ್ತಿದೆ? ನಮ್ಮ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಜನರು ಮುಗ್ಧರು. ಕಳೆದ 20 ವರ್ಷಗಳಿಂದ ಒಂದು ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ತೋರಿಸುತ್ತಾ ಬಂದಿದ್ದಾರೆ. ಆದರೆ, ಇಂತಹ ಆಪತ್ತಿನ ಸಮಯದಲ್ಲಿ ಯಾವುದೇ ಸಹಾಯವನ್ನು ಮಾಡದ ಸಂಸದರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪಾಗಿ ಪರಿಣಮಿಸಿದೆ. ಇಂತಹ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಾವೇ ನಾಚಿಕೆ ಪಡಬೇಕಿದೆ ಎಂದರು.

ಪ್ರವಾಹದಿಂದಾಗಿ ಅಲ್ಲಿನ ಜನರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದು, ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡಿಗಾಸೂ ನೀಡಿಲ್ಲ. ನೆರೆ ಪೀಡಿತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಆದರೆ ಉತ್ತರ ಭಾರತದ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಪ್ರಧಾನಿ ಸ್ಪಂದಿಸುತ್ತಾರೆ. ಕರ್ನಾಟಕದ ಜನರ ಬಗ್ಗೆ ಒಂದು ಮಾತೂ ಆಡುವುದಿಲ್ಲ ಎಂದು ಟೀಕಿಸಿದರು.

ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ಆಕ್ರೋಶ ವ್ಯಕ್ತಪಡಿಸಿದರು. ರಾಜಾಜಿನಗರ ಗ್ರೌಂಡ್‌ನಿಂದ ಆರಂಭಿಸಿ ಸ್ವಾತಂತ್ರ ಉದ್ಯಾನವದವರೆಗೂ ಜಾಥಾ ಮೆರವಣಿಗೆ ನಡೆಸಿ ಸರಕಾರಗಳ ವಿರುದ್ಧ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News