ಯಶಸ್ವಿ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿದ ಸಪ್ತಗಿರಿ ಕಾಲೇಜು ವೈದ್ಯರು

Update: 2019-10-03 17:16 GMT

ಬೆಂಗಳೂರು, ಅ.3: ಹೃದಯ ಕವಾಟಿನ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ಮೂವರಿಗೆ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವೈದ್ಯರು ನಡೆಸಿರುವ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಹೃದಯ ತಜ್ಞ ವೈದ್ಯ ಡಾ.ತಮೀಮ್ ಅಹಮದ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮೂಲದ 16 ವರ್ಷದ ಬಾಲಕಿಯು ಹೃದಯ ರೋಗದಿಂದ ಬಳಲುತ್ತಿದ್ದಳು. ಎರಡು ಇಂಚಿನಷ್ಟು ಹೃದಯ ಭಾಗವನ್ನು ಕೊರೆದು ಎಂಡೋಸ್ಕೋಪಿ ಮೂಲಕ ಹಾಳಾಗಿದ್ದ ಹೃದಯ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ವಾಲ್ವ್ ಸರಿಪಡಿಸಲು ಸಾಧನಗಳ ಬದಲು ಬಟ್ಟೆಯಂತಹ ವಸ್ತುವನ್ನು ಬಳಸಲಾಗಿದೆ. ಇದು ಅತ್ಯಂತ ವಿರಳ ಶಸ್ತ್ರಚಿಕಿತ್ಸೆಯಾಗಿದೆ. ಇದೇ ಮೊದಲ ಬಾರಿಗೆ ಕವಾಟ ಬದಲಾವಣೆಯಲ್ಲಿ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಾಲಕಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ನುಡಿದರು.

ಬಿಜಾಪುರದ 22 ವರ್ಷದ ಯುವಕ ಹಾಗೂ ಸುರಪುರದ 29 ವರ್ಷದ ಮಹಿಳೆಗೆ ಹಾನಿಗೆ ಒಳಗಾಗಿದ್ದ ಹೃದಯ ಕವಾಟನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸಲಾಗಿದೆ. ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವ ಹೆಚ್ಚಿರುವುದಿಲ್ಲ. ಹಾಗೇ ವೆಚ್ಚವೂ ಕಡಿಮೆ. ರೋಗಿಯು ಬಹುಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ಹೃದಯ ಕವಾಟ ಶಸ್ತ್ರಚಿಕಿತ್ಸೆಯನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿದರು.

ಎದೆಯ ಮೂಳೆಗಳನ್ನು ಕತ್ತರಿಸಿ ನಡೆಸುವ ಶಸ್ತ್ರಚಿಕಿತ್ಸೆ ಅತ್ಯಂತ ದುಬಾರಿಯೂ ಹೌದು. ಜತೆಗೆ ಅಪಾಯಕಾರಿಯೂ ಆಗಿದೆ. ಸುದ್ದಿಗೋಷ್ಠಿಯಲ್ಲಿ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೃದಯ ತಜ್ಞ ಡಾ.ಇಂತಿಕಾಬ್ ಆಲಂ, ಅನಸ್ತೇಶಿಯಾ ತಜ್ಞೆ ಡಾ. ಪದ್ಮ, ಸಂಸ್ಥೆಯ ಡೀನ್ ಡಾ.ಜಯಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News