ರಾಜ್ಯದ ನೆರೆ ನಷ್ಟದ ವರದಿಯನ್ನು ಕೇಂದ್ರ ತಿರಸ್ಕರಿಸಿಲ್ಲ: ಸಿಎಂ ಯಡಿಯೂರಪ್ಪ

Update: 2019-10-04 11:38 GMT

ಬೆಳಗಾವಿ, ಅ. 4: ‘ನೆರೆ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದಿಂದ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಬೆಳಗಾವಿಯಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೆರೆ ಪರಿಸ್ಥಿತಿಯ ಬಗ್ಗೆ ರಾಜ್ಯದ ಪ್ರಸ್ತಾವ ಹಾಗೂ ಕೇಂದ್ರ ಅಧ್ಯಯನ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ ಪರಿಶೀಲಿಸಬೇಕಿದೆ ಎಂದು ಕೇಂದ್ರ ಸರಕಾರ ಹೇಳಿದೆ’ ಎಂದು ವಿವರಣೆ ನೀಡಿದರು.

ನೆರೆ ಸಂತ್ರಸ್ತರ ಸಂಬಂಧ ಕೇಂದ್ರಕ್ಕೆ ಸ್ಪಷ್ಟನೆ ಹಾಗೂ ಮಾಹಿತಿ ನೀಡಲೆಂದೇ ರಾಜ್ಯದ ಇಬ್ಬರು ಅಧಿಕಾರಿಗಳು ಹೊಸದಿಲ್ಲಿಗೆ ಕಳುಹಿಸಲಾಗಿದೆ. ಕೇಂದ್ರ ಸರಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದು ಅಪ್ಪಟ ಸುಳ್ಳು. ಕೇಂದ್ರ ಸರಕಾರದ ಎಲ್ಲ ಸಚಿವರೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಕೇಂದ್ರದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ, ದೇಶದ ಯಾವುದೇ ಪ್ರವಾಹ ಪೀಡಿತ ರಾಜ್ಯಗಳಿಗೂ ಕೇಂದ್ರದಿಂದ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಕೇಂದ್ರವನ್ನು ಸಮರ್ಥಿಸಿದರು.

ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಮೊತ್ತದ ಪರಿಹಾರ ಬಿಡುಗಡೆ ಆಗುವ ವಿಶ್ವಾಸ ಇದೆ ಎಂದ ಯಡಿಯೂರಪ್ಪ, ರಾಜ್ಯ ಸರಕಾರದ ಬೊಕ್ಕಸ ಖಾಲಿ ಆಗಿಲ್ಲ. ಖಾಲಿ ಆಗಿದ್ದರೆ ಪ್ರವಾಹ ಪರಿಹಾರಕ್ಕೆ ಇಷ್ಟೊಂದು ಹಣ ನೀಡಲು ಆಗುತ್ತಿರಲಿಲ್ಲ. ಬಜೆಟ್‌ನಲ್ಲಿ ಸಂತ್ರಸ್ತರ ಪುನರ್ವಸತಿಗೆ ಹೆಚ್ಚಿನ ಹಣ ಮೀಸಲಿಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News