ಗಝಲ್‌ಗಳಿಗೆ ದೇಶ, ಕಾಲ, ಜಾತಿಯ ಚೌಕಟ್ಟಿಲ್ಲ: ವಿಮರ್ಶಕ ರಾಜಶೇಖರ ಮಠಪತಿ

Update: 2019-10-05 16:29 GMT

ಬೆಂಗಳೂರು, ಅ.5: ಗಝಲ್‌ಗಳಿಗೆ ದೇಶ, ಕಾಲ, ಜಾತಿಯ ಹಂಗಿರುವುದಿಲ್ಲ. ಒಂದು ವೇಳೆ ಮಿತಿಗಳಿಗೆ ಒಳಪಟ್ಟಿದ್ದರೆ, ಅದು ಗಝಲ್ ಆಗಲಾರದು ಎಂದು ವಿಮರ್ಶಕ ರಾಜಶೇಖರ ಮಠಪತಿ ಅಭಿಪ್ರಾಯಿಸಿದ್ದಾರೆ. 

ಶನಿವಾರ ಅವಿರತ ಪ್ರಕಾಶನ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಕವಿ ಸಂಗಮೇಶ ಬಾದವಾಡಗಿ ಅವರ ‘ಜೀವನ್ಮುಖಿ ಗಝಲ್’ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪಾಕಿಸ್ತಾನದ ಪ್ರಸಿದ್ಧ ಕವಿ ಫೈಝ್ ಅಹ್ಮದ್ ಫೈಝ್ ಉರ್ದು, ಹಿಂದಿ, ಪಂಜಾಬಿ, ಅರಬಿಕ್, ಪರ್ಷಿಯನ್ ಭಾಷೆಗಳಲ್ಲಿ ಗಝಲ್ ರಚಿಸಿದ್ದಾರೆ. ಇವರನ್ನು ಒಂದು ದೇಶಕ್ಕೆ, ಒಂದು ಭಾಷೆಗೆ ಸೀಮಿತಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾವ್ಯವಾಗಲಿ, ಗಝಲ್‌ಗಳಾಗಲಿ ಯಾರ ಸೊತ್ತಲ್ಲ. ಹಾಗೂ ಅದರ ಜನಪ್ರಿಯತೆಗೆ ಪ್ರಚಾರ ಬೇಕಿಲ್ಲ. ಅದು ತನ್ನ ಶಕ್ತಿಯಿಂದಲೇ ಓದುಗನ, ಕೇಳುಗನ ಮನಸೂರೆ ಗೊಳಿಸಬಲ್ಲವು. ಗಝಲ್‌ಗಳು ಯಾವುದೇ ಭಾಷೆಯಲ್ಲಿದ್ದರು, ಅದರಿಂದ ಹೊರಹೊಮ್ಮುವ ಭಾವ ಎಲ್ಲರ ಮನಸನ್ನು ತಟ್ಟಬಲ್ಲದು ಎಂದು ಅವರು ಹೇಳಿದರು.

ಗಝಲ್‌ಗಳಿಗೂ ವಚನಗಳಿಗೂ ಸಾಕಷ್ಟು ಸಾಮ್ಯತೆ ಇದೆ. ಇವುಗಳಲ್ಲಿ ಬಾಗುವುದು, ತಾಗುವುದು ಹಾಗೂ ಧಿಕ್ಕರಿಸುವಂತಹ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಒಟ್ಟು ಸಾರಾಂಶದಲ್ಲಿ ಗಝಲ್ ಅಂದರೆ, ಜಿಂಕೆಯ ಕಣ್ಣಿನಿಂದ ಬಿದ್ದ ಕಟ್ಟಕಡೆಯ ಕಣ್ಣೀರಿನ ಬಿಂದು ಎಂದು ವರ್ಣಿಸಲಾಗಿದೆ. ಸೂಕ್ಷ್ಮವಾದ ಮನಸುಗಳಿಗೆ ಮಾತ್ರ ಗಝಲ್‌ಗಳು ದಕ್ಕಲು ಸಾಧ್ಯವೆಂದು ಅವರು ಹೇಳಿದರು.

ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ, ದೇಶದ ಸಾಹಿತ್ಯ ಲೋಕದಲ್ಲಿ ಗಝಲ್‌ಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಗಝಲ್ ಹಾಡುಗಳು ಹೆಚ್ಚಾಗಿವೆ. ಇದು ರಾಜ್ಯದ ಇತರೆ ಭಾಗಗಳಲ್ಲೂ ವಿಸ್ತರಣೆಯಾಗಬೇಕಾಗಿದೆ. ಗಝಲ್‌ಗಳನ್ನು ಕೇಳುವುದೇ ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕವಿ ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಚನ್ನಪ್ಪ ಅಂಗಡಿ ಹಾಗೂ ಕೃತಿಕಾರ ಕವಿ ಸಂಗಮೆೀಶ ಬಾದವಾಡಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News