ಮೃತ ರಮೇಶ್ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ನೀಡಿ: ವಿ.ಎಸ್.ಉಗ್ರಪ್ಪ

Update: 2019-10-14 13:04 GMT

ಬೆಂಗಳೂರು, ಅ.14: ಮನುಷ್ಯತ್ವ ಕಳೆದುಕೊಂಡವರಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆದುಕೊಂಡಿದ್ದಾರೆ. ರಮೇಶ್ ತಪ್ಪು ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ಅವರಿಗೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಆತ್ಮಹತ್ಯೆ ಬಳಿಕ ಐಟಿ ಅಧಿಕಾರಿಗಳು ನಾವು ರಮೇಶ್‌ನನ್ನು ವಿಚಾರಣೆ ಮಾಡಿಲ್ಲ, ಅವರ ಮನೆಗೆ ಹೋಗಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಅಧಿಕಾರಿಗಳು ರಮೇಶ್ ಮನೆಗೆ ಹೋದ ದೃಶ್ಯಾವಳಿಗಳನ್ನು ಮಾಧ್ಯಮಗಳೇ ಪ್ರಸಾರ ಮಾಡಿವೆ ಎಂದರು.

ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಪತ್ರದಲ್ಲಿ 'ಐಟಿ ದಾಳಿಯಿಂದ ನನಗೆ ನೋವಾಗಿದೆ. ನನ್ನ ಕುಟುಂಬಕ್ಕೆ ಆ ನೋವನ್ನು ಕೊಡಬೇಡಿ' ಎಂದು ಮನವಿ ಮಾಡಿದ್ದಾರೆ. ಈ ಪತ್ರವನ್ನು ರಮೇಶ್ ಅವರ ‘ಡೈಯಿಂಗ್ ಡಿಕ್ಲರೇಷನ್’ ಎಂದು ಪರಿಗಣಿಸಬೇಕೆಂದು ಉಗ್ರಪ್ಪ ಆಗ್ರಹಿಸಿದರು.

ರಮೇಶ್ ಸಾವಿನ ನೈತಿಕ ಹೊಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರಬೇಕು. ಐಟಿ ಅಧಿಕಾರಿಗಳು ವೀರಾವೇಶದಿಂದ ಅವರಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಬೀದಿ ಪಾಲಾಗಿರುವ ರಮೇಶ್ ಮಕ್ಕಳ ಭವಿಷ್ಯ ರೂಪಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಅವರು ಹೇಳಿದರು.

ಸಾವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ, ಸಹ ರಮೇಶ್ ಕುಟುಂಬದ ರಕ್ಷಣೆಗೆ ಒಂದು ಕೋಟಿ ರೂ.ಪರಿಹಾರವನ್ನು ಐಟಿ ಇಲಾಖೆಯವರು ನೀಡಬೇಕು. ರಮೇಶ್‌ಗೆ ಕಿರುಕುಳ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಸ್ಥಿತಿಗೆ ತಲುಪುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕ ಪರಿಸ್ಥಿತಿ, ಅದರಲ್ಲೂ ಜಿಡಿಪಿ 2016-17ರಲ್ಲಿ ಶೇ.8.17, 2017-18ರಲ್ಲಿ ಶೇ.7.2, 2018-19ರಲ್ಲಿ ಶೇ.6.8 ಹಾಗೂ 2019-20ರಲ್ಲಿ ಶೇ.6ಕ್ಕೆ ಕುಸಿಯುವ ಮೂಲಕ ದೇಶದಲ್ಲಿ ಬಡತನ, ನಿರುದ್ಯೋಗ ಇನ್ನಿತರ ಸಮಸ್ಯೆಗಳು ಉಲ್ಬಣವಾಗಲು ಕೇಂದ್ರ ಸರಕಾರ ನೇರ ಕಾರಣವಾಗಿದೆ ಎಂದು ಅವರು ದೂರಿದರು.

ಜನಸಾಮಾನ್ಯರ ಬದುಕಿಗೆ ಬೇಕಿರುವ ಆರ್ಥಿಕ ಸ್ಥಿರತೆ ಕಾಪಾಡುವುದು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಕೆಲಸವಲ್ಲವೇ? ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಂದ ಮರೆ ಮಾಚಲು ಅಡ್ಡ ದಾರಿ ಹಿಡಿದಿದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಐಟಿ ಹಾಗೂ ಈಡಿ ದಾಳಿಗಳು ರಾಜಕೀಯ ಪ್ರೇರಿತವಾದದ್ದು ಎಂಬುದು ಜಗಜ್ಜಾಹೀರವಾಗಿದೆ ಎಂದು ಉಗ್ರಪ್ಪ ಹೇಳಿದರು.

ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಅದೇ ಕ್ಷೇತ್ರಗಳಲ್ಲಿ 100 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಚುನಾವಣಾ ಆಯೋಗ ನಿರ್ಜೀವವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News