ದುಬೈಯ ಈಜುಕೊಳದಲ್ಲಿ ಭಟ್ಕಳದ ಬಾಲಕ ಮೃತ್ಯು

Update: 2019-10-19 16:58 GMT

ಭಟ್ಕಳ: ಭಟ್ಕಳ ಮೂಲದ ದುಬೈ ವಾಸಿ ಬಾಲಕನೋರ್ವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಮುಹಮ್ಮದ್ ಶಾಬಂದ್ರಿ ಬಿನ್ ಮುಹಮ್ಮದ್ ಆಸೀಮ್ ಶಾಬಂದ್ರಿ (5) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ದುಬೈ ಸಮಯ 5.30ಕ್ಕೆ ಅಲ್ ಗರೀರ್ ಕಟ್ಟಡದ ಮೂರನೆ ಅಂತಸ್ತಿನಲ್ಲಿರುವ ಮಕ್ಕಳ ಈಜುಕೊಳದಲ್ಲಿ ಇತರ ಮಕ್ಕಳೊಂದಿಗೆ ಈಜುತ್ತಿದ್ದ ಎನ್ನಲಾಗಿದ್ದು ಪಕ್ಕದಲ್ಲಿ ಹಿರಿಯ ಈಜುಕೊಳವು ಇದ್ದು ಅಲ್ಲಿ ಐದಾರು ಮಂದಿ ಯುವಕರು ಈಜುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಅಕಸ್ಮಿಕವಾಗಿ ಮಗು ಹಿರಿಯರ ಕೊಳದಲ್ಲಿ ಬಂದು ಸೇರಿಕೊಂಡಿರುವುದು ಯಾರದ್ದೆ ಗಮನಕ್ಕೆ ಬಾರದೆ ಇರುವುದರಿಂದ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕ ಹಿರಿಯರ ಈಜುಕೊಳದಲ್ಲಿ ಮುಳುಗುತ್ತಿರುವಾಗ ಆತನನ್ನು ರಕ್ಷಿಸಿ ಪೊಲೀಸರ ಸಹಾಯದಿಂದ ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪ್ರಯತ್ನ ವಿಫಲಗೊಂಡಿದ್ದು ಭಾರತೀಯ ಸಮಯ ಶುಕ್ರವಾರ ರಾತ್ರಿ 11.30ಕ್ಕೆ ಬಾಲಕ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. 

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳ ದುಬೈ ಜಮಾತ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್, ಸರ್ಫರಾಝ್ ಜುಕಾಕೋ, ಆಫಾಖ್ ನಾಯ್ತೆ, ಇಮ್ರಾನ್ ಖತೀಬ್ ಮತ್ತಿತರ ಭಟ್ಕಳ  ದುಬೈ ಜಮಾತ್ ಸದಸ್ಯರು ಆಸ್ಪತ್ರೆಗೆ ತೆರಳಿ ಬಾಲಕ ಮೃತದೇಹ ಪಡೆಯಲು ಕಾನೂನು ಕ್ರಮಗಳನ್ನು ಕೈಗೊಂಡರು ಎಂದು ತಿಳಿದುಬಂದಿದೆ.

ಮೃತ ಬಾಲಕ ಮುಹಮ್ಮದ್ ಶಾಬಂದ್ರಿ ದುಬೈ ನ ಸೆಂಟ್ರಲ್ ಸ್ಕೂಲ್ ನಲ್ಲಿ ಕೆ.ಜಿ (2) ತರಗತಿ ಯಲ್ಲಿ ಓದುತ್ತಿದ್ದನು ಎಂದು ತಿಳಿದುಬಂದಿದ್ದು  ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದುಬೈ ಮತ್ತು ಯುಎಇ ಯಲ್ಲಿ ವಾಸಿಸುತ್ತಿರುವ ಭಟ್ಕಳಿ ಸಮುದಾಯ ಆಸ್ಪತ್ರೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News