​ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ

Update: 2019-10-22 15:33 GMT

ಪುತ್ತೂರು: ನಗರಸಭಾ ಮಾಜಿ ಸದಸ್ಯರಾದ ಜಗದೀಶ್ ನೆಲ್ಲಿಕಟ್ಟೆ, ನವೀನ್ ಚಂದ್ರ ನಾಯ್ಕ್, ಕಮಲಾ ಆನಂದ ಮತ್ತು ಹಾಲಿ ನಗರಸಭಾ ಸದಸ್ಯೆ ದೀಕ್ಷಾ ಪೈ ಅವರು ನನ್ನ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನಗರಸಭಾ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದ್ ಆಲಿ ತಿಳಿಸಿದ್ದಾರೆ.

2014ರಲ್ಲಿ ಸೆ. 30ರಂದು ನಗರಸಭಾ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು. ಈ ಸಂದರ್ಭ 4 ಮಂದಿ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದ ಪರಿಣಾಮ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿದ್ದ ಎಚ್. ಮಹಮ್ಮದ್ ಆಲಿ ಸೋಲುಂಡಿದ್ದರು. ಈ ಸೋಲಿನ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ್ದ ಆಲಿ ಅವರು ಯಾರಾದರೂ ಸಾಕುವಾಗ ಜಾತಿ ನಾಯಿಯನ್ನು ಸಾಕಬೇಕು. ಆದರೆ ನಮ್ಮ ಪಕ್ಷ ಕೆಲವು ಬೀದಿ ನಾಯಿಗಳನ್ನು ಸಾಕಿದೆ. ಪಕ್ಷಾಂತರ ನಡೆಸಿದರೆ ನಮ್ಮ ಅಧಿಕಾರವೂ ಹೋಗುತ್ತದೆ ಎಂಬ ಕನಿಷ್ಟ ತಿಳುವಳಿಕೆ ಅವರಿಗೆ ಬೇಕಿತ್ತು. ನಾನು ಬಲಿಯಾದರೂ ಪರವಾಗಿಲ್ಲ. ಕಾನೂನು ಹೋರಾಟ ನಡೆಸಿ ಪಕ್ಷಾಂತರ ನಿಷೇಧ ಕಾಯ್ದೆಗೆ ಬಲ ತರುತ್ತೇನೆ ಎಂದಿದ್ದರು.

ಈ ಹೇಳಿಕೆ ವಿರುದ್ಧ ಆಗ ನಗರಸಭಾ ಸದಸ್ಯರಾಗಿದ್ದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ನವೀನ್ ಚಂದ್ರ ನಾಯ್ಕ್, ಕಮಲಾ ಆನಂದ, ದೀಕ್ಷಾ ಪೈ ಅವರು ನಮ್ಮನ್ನು ನಾಯಿಗಳೆಂದು ಕರೆದು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ 2015 ರಲ್ಲಿ ಪುತ್ತೂರು ಮುನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ರವರ ನ್ಯಾಯಾಲಯದಲ್ಲಿ 4 ಪ್ರತ್ಯೇಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ನ್ಯಾಯಾಲಯದಲ್ಲಿ ಈ ವಿಚಾರಣೆ ನಡೆಯುತ್ತಿದ್ದು, ಈ ವಿಚಾರಣೆಗೆ ಹೈಕೋರ್ಟಿನಿಂದ ಎಚ್.ಮಹಮ್ಮದ್ ಆಲಿ ಅವರು ತಡೆಯಾಜ್ಞೆ ತಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News