ಮೂಡುಬಿದಿರೆ: ಶ್ರೀ ರಾಮ್ ಫೌಂಡೇಶನ್‍ನಿಂದ 6.48 ಲಕ್ಷ ರೂ. ವಿದ್ಯಾರ್ಥಿವೇತನ

Update: 2019-10-23 16:59 GMT

ಮೂಡುಬಿದಿರೆ : ದೇಶದ ಅಭ್ಯುದಯದಲ್ಲಿ ಸಾರಿಗೆ ಉದ್ಯಮದ ಕೊಡುಗೆ ಮಹತ್ವಪೂರ್ಣವಾಗಿದ್ದು  ಈ ಕುರಿತಾದ ಆರ್ಥಿಕ ವ್ಯವಹಾರ ಮಾಡುವ ಶ್ರೀರಾಮ್ ಕಂಪೆನಿ ವಾಹನ ಚಾಲಕರ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಅವರ ಬದುಕಿಗೆ ಬೆಳಕಾಗುತ್ತಿರುವುದು ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಶ್ರೀ ರಾಮ್ ಫೌಂಡೇಶನ್‍ನ ಪ್ರಾಯೋಜಕತ್ವದಲ್ಲಿ  ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್  ಕಂಪೆನಿ ಲಿ. ಇದರ ಆಶ್ರಯದಲ್ಲಿ  ಮೂಡುಬಿದಿರೆ ಸಮಾಜ ಮಂದಿರದಲ್ಲಿ  ಬುಧವಾರ ನಡೆದ ಸಮಾರಂಭದಲ್ಲಿ  203 ವಿದ್ಯಾರ್ಥಿಗಳಿಗೆ 6.48 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

'ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ಬಹಳ ಎಚ್ಚರದಿಂದ, ಕಾಳಜಿಯಿಂದ ಅಧ್ಯಯನ ಮಾಡಬೇಕು; ಸರಕಾರದಿಂದ , ಖಾಸಗಿ ವಲಯಗಳಿಂದ ಲಭಿಸುವ ಎಲ್ಲ ಆರ್ಥಿಕ ಮತ್ತು ಇತರ ಸೌಕರ್ಯಗಳನ್ನು  ಸದುಪಯೋಗಪಡಿಸಿಕೊಂಡು, ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ವಿಯಾಗಲು ಪಣತೊಡಬೇಕು' ಎಂದರು. ಅವರು ಹೇಳಿದರು.

ತಹಶೀಲ್ದಾರ್ ಅನಿತಾಲಕ್ಷ್ಮೀ ಅವರು ಮಾತನಾಡಿ, `ಕನಸು ಕಾಣುವಲ್ಲಿಗೇ ನಿಲ್ಲಬೇಡಿ, ಕಂಡ ಕನಸಿನ ಬೆಂಬತ್ತಿ ಅದನ್ನು ಸಾಕಾರಗೊಳಿಸಿ' ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪಿಎಸ್‍ಐ ದೇಜಪ್ಪ,  ಜೈನ್ ಕ್ಯಾರಿಯರ್ ಟ್ರೈನಿಂಗ್ ಅಕಾಡೆಮಿಯ ಅಧ್ಯಕ್ಷ ಪ್ರವೀಣ್‍ಚಂದ್ರ ಜೈನ್, ದ.ಕ. ಉಡುಪಿ ಜಿಲ್ಲೆಯ  ಕರಾವಳಿ ಸ್ಟೋನ್ ಆ್ಯಂಡ್ ಕ್ರಶರ್ ಮಾಲಕರ ಸಂಘಟನೆಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಮೂಡುಬಿದಿರೆ ಟೂರಿಸ್ಟ್ ಯೂನಿಯನ್ ಅಧ್ಯಕ್ಷ ದಾಮೋದರ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ  ಶರಶ್ಚಂದ್ರ ಭಟ್, ಕಾಕುಂಜೆ ಅವರು ಪ್ರಸ್ತಾವನೆಗೈದರು. 40 ವರ್ಷಗಳ ಹಿಂದೆ ಪ್ರಾರಂಭವಾದ ಕಂಪೆನಿಯು  ದೇಶದಲ್ಲಿ 1386 ಶಾಖೆಗಳು, 28 ಲಕ್ಷ ಗ್ರಾಹಕರನ್ನು ಹೊಂದಿದ್ದು  ರೂ. 1 ಲಕ್ಷ ಕೋಟಿಯ ವ್ಯವಹಾರ ನಡೆಸುತ್ತಿದ್ದು ತನ್ನ ಲಾಭಾಂಶದಿಂದ ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಪರಂಪರೆಯನ್ನು  ಬೆಳೆಸಿಕೊಂಡು ಬಂದಿದೆ' ಎಂದು ತಿಳಿಸಿದರು.

ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪೆನಿಯ ಪ್ರಾದೇಶಿಕ ಮುಖ್ಯಅ„ಕಾರಿಗಳಾದ ಸದಾಶಿವ ಅಮೀನ್(ಬಿಸಿನೆಸ್), ಚೇತನ ಅರಸ್ (ಕಲೆಕ್ಷನ್), ಸದಾನಂದ ಪೈ (ಮಾರಾಟ), ಗಣಪತಿ ನಾಯ್ಕ್(ವಸೂಲಾತಿ)ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮ್ಮಾನ

ಎಸ್‍ಎಸ್‍ಎಲ್‍ಸಿಯಲ್ಲಿ 625ರಲ್ಲಿ 625 ಅಂಕ ಗಳಿಸಿದ ಆಳ್ವಾಸ್‍ನ ಸುಜ್ಞಾನ್ ಆರ್. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗುರುರಾಜ ಹೊಳ್ಳ ಸ್ವಾಗತಿಸಿದರು. ಯೋಗೀಶ ಶೆಟ್ಟಿ  ಫಲಾನುಭವಿ ವಿದ್ಯಾರ್ಥಿಗಳ ವಿವರ ನೀಡಿದರು. ಶಾಖಾ ಪ್ರಬಂಧಕ ರಾಜೇಶ್ ಶೆಟ್ಟಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News