ಸಾವರ್ಕರ್‌ಗೆ ಅವಮಾನ; ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು - ಶೋಭಾ ಕರಂದ್ಲಾಜೆ ಆಗ್ರಹ

Update: 2019-10-24 14:35 GMT

ಉಡುಪಿ, ಅ.24: ದೇಶದ ಸ್ವಾತಂತ್ರ ಹೋರಾಟದ ಇತಿಹಾಸವನ್ನೇ ಅರಿಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದಕ್ಕಾಗಿ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

‘ಗಾಂಧಿ ಸಂಕಲ್ಪ ಯಾತ್ರೆ’ಯ ಕೊನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಕುಟುಂಬವೇ ದೇಶಕ್ಕಾಗಿ ತ್ಯಾಗ ಮಾಡಿದೆ. ಸಿದ್ಧರಾಮಯ್ಯರಿಗೆ ಓಟು, ಜಾತಿ, ಧರ್ಮ ಮಾತ್ರ ಕಾಣುತ್ತದೆ. ನಮಗೆ ಸಾವರ್ಕರ್ ಅವರ ತ್ಯಾಗವೇ ಮುಖ್ಯ. ಹೀಗಾಗಿ ಅವರಿಗೆ ಭಾರತ ರತ್ನ ಗೌರವ ಸಿಗಲೇ ಬೇಕು ಎಂದರು.

ಇಂಥ ವಿಷಯಗಳು ಸಿದ್ಧರಾಮಯ್ಯರಂಥ ಕ್ಷುಲ್ಲಕ, ಚೀಪ್ ರಾಜಕಾರಣಿಗೆ ಅರ್ಥವಾಗಲ್ಲ. ದೇಶದ ಸ್ವಾತಂತ್ರ ಹೋರಾಟದ ಇತಿಹಾಸವನ್ನು ಸಿದ್ಧರಾಮಯ್ಯ ಮೊದಲು ತಿಳಿದುಕೊಳ್ಳಲಿ. ಸಾವರ್ಕರ್‌ಗೆ ಸಿದ್ಧರಾಮಯ್ಯ ಅವರ ಸರ್ಟಿಫಿಕೇಟ್‌ನ ಅಗತ್ಯವಿಲ್ಲ ಎಂದು ಶೋಭಾ ನುಡಿದರು.
ಬಿಜೆಪಿಯದೇ ಸರಕಾರ: ಮಹಾರಾಷ್ಟ್ರ ಹಾಗೂ ಹರಿಯಾಣ ಎರಡೂ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಬಹುಮತ ಬಂದಿದೆ. ಹರಿಯಾಣದಲ್ಲೂ ಬಿಜೆಪಿಯೇ ಸರಕಾರ ರಚಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಜಾಮೀನಿನಲ್ಲಿ ಬಿಡುಗಡೆಗೊಂಡ ಡಿಕೆಶಿ ಜೈಲಿನಿಂದ ಹೊರಬಂದಿರುವುದಕ್ಕೆ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿರುವುದಕ್ಕೆ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಂಡ ಶೋಭಾ, ಡಿಕೆಶಿ ಏನು ಸ್ವಾತಂತ್ರ ಹೋರಾಟ ನಡೆಸಿ ಜೈಲಿನಿಂದ ಬಿಡುಗಡೆಯಾಗಿದ್ದಾ ಎಂದು ಪ್ರಶ್ನಿಸಿದರು.

ಡಿಕೆಶಿ ವಿರುದ್ಧ ಇನ್ನೂ ಅನೇಕ ಕೇಸುಗಳ ವಿಚಾರಣೆ ನಡೆಯುತ್ತಿದೆ. ಮೊದಲು ಅವುಗಳ ವಿಚಾರಣೆ ಮುಗಿಯಲಿ. ಡಿಕೆಶಿ ಚುನಾವಣಾ ರಾಜಕೀಯಕ್ಕೆ ಅನಂತರ ಬರಲಿ ಎಂದು ಶೋಭಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News