ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ, ಭತ್ತದ ಬೆಳೆಗೆ ಅಪಾರ ಹಾನಿ

Update: 2019-10-24 14:37 GMT

ಉಡುಪಿ, ಅ.24: ಪಶ್ಚಿಮ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಇದು ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು ಇದರಿಂದ ಉಡುಪಿ ಜಿಲ್ಲೆಯಾದ್ಯಂತ ಕಳೆದ 36 ಗಂಟೆಗಳಿಂದ ಭಾರೀ ಮಳೆ ಸುರಿಯುತಿದೆ. ಮುಂದಿನ 48 ಗಂಟೆಯಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇದರಿಂದ ಕಟಾವಿಗೆ ಸಿದ್ಧವಾದ ಭತ್ತ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದ ವರದಿ ಜಿಲ್ಲೆಯಾದ್ಯಂತದಿಂದ ಬಂದಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಉತ್ತಮ ಫಸಲು ಬಂದಿರುವುದರಿಂದ ಜಿಲ್ಲೆಯ ರೈತರು ಗೆಲುವಾಗಿದ್ದರೆ, ಆದರೆ ಕಳೆದೆರಡು ದಿನಗಳ ಸತತ ಮಳೆ ಅವರ ಖುಷಿಯನ್ನು ಕಸಿದುಕೊಂಡಿದೆ.

ಬಯಲು ಪ್ರದೇಶದ ಭತ್ತದ ಬೆಳೆ ಕಟಾವಿಗೆ ಸಿದ್ಧವಾಗಿದೆ. ಕೆಲವು ಕಡೆಗಳಲ್ಲಿ ಕಟಾವು ಮಾಡಲಾಗಿದೆ. ಆದರೆ ಕಳೆದೆರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಭತ್ತದ ಪೈರು ಧರಾಶಾಹಿಯಾಗಿದೆಯಲ್ಲದೇ, ಕಟಾವು ಮಾಡಿದ ಪೈರು ಮಳೆಯಿಂದಾಗಿ ಗದ್ದೆ ಯಲ್ಲೇ ಮೊಳಕೆ ಬರುವ ಸ್ಥಿತಿಯಲ್ಲಿದೆ. ಇದರಿಂದ ಕೆಲವರು ಪೈರನ್ನು ಮನೆಗೆ ತಂದರೂ ಮಳೆಯಿಂದ ಅವುಗಳನ್ನು ರಕ್ಷಿಸಲು ಸಾಧ್ಯವಿಲ್ಲ ದಂತಾಗಿದೆ. ಕೆಲವು ಕಡೆಗಳಲ್ಲಿ ಪೈರು ನೀರಿನಲ್ಲಿ ತೇಲುತ್ತಿದೆ ಎಂದು ರೈತರು ಗೋಳು ತೋಡಿಕೊಳ್ಳುತಿದ್ದಾರೆ.

8ಸೆ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 8.12 ಸೆ.ಮೀ. ಮಳೆಯಾಗಿದೆ. ಈ ದಿನದ ಸಾಮಾನ್ಯ ಮಳೆ 4ಮಿ.ಮೀ. ಆಗಿದ್ದರೆ, ಈ ಬಾರಿ 81 ಮಿ.ಮೀ. ಮಳೆಯಾಗಿರುವುದು ವಿಷಯದ ಗಂಭೀರತೆಗೆ ಸಾಕ್ಷಿಯಾಗಿದೆ.
ಉಡುಪಿಯಲ್ಲಿ ಗರಿಷ್ಠ 97.1ಮಿ.ಮೀ. ಮಳೆಯಾಗಿದ್ದರೆ, ಕುಂದಾಪುರದಲ್ಲಿ 86.4ಮಿ.ಮೀ. ಹಾಗೂ ಕಾರ್ಕಳದಲ್ಲಿ 59.7ಮಿ.ಮೀ. ಮಳೆ ಸುರಿದಿದೆ. ನಿನ್ನೆ ಸಂಜೆಯಿಂದ ಸತತವಾಗಿ ಮಳೆ ಸುರಿಯುತಿದ್ದು, ಆಗಾಗ ಭಾರೀ ಗಾಳಿಯು ಬೀಸುತ್ತಿದೆ. ಇದರಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಮರ ಹಾಗೂ ವಿದ್ಯುತ್ ತಂತಿಗಳು ನೆಲಕ್ಕುರುಳಿವೆ. ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಕಾಮಗಾರಿ ನಡೆಯುತ್ತಿರುವ ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಮೇಲೆಯೇ ಹರಿಯುತ್ತಿದೆ. ಆದರೆ ದೊಡ್ಡ ಮಟ್ಟದ ಹಾನಿ ಜಿಲ್ಲೆಯ ಯಾವುದೇ ಕಡೆಯಿಂದ ವರದಿಯಾಗಿಲ್ಲ.

ಸೆಟಲೈಟ್ ಚಿತ್ರಗಳಿಂದ ತಿಳಿದುಬಂದಂತೆ ಇಂದು ಬೆಳಗ್ಗೆ 8:30ರ ಸುಮಾರಿಗೆ ಮಹಾರಾಷ್ಟ್ರದ ರತ್ನಗಿರಿಯಿಂದ 360ಕಿ.ಮೀ. ದೂರದ ಪಶ್ಚಿಮ-ಆಗ್ನೇಯ ಭಾಗದ ಅರಬಿಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದ್ದು ಅದು ಚಲಿಸುತ್ತಾ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ವಾಗಿ ಬದಲಾಗಲಿದೆ. 25ರ ಸಂಜೆ ವೇಳೆಗೆ ಅದು ಇನ್ನಷ್ಟು ಬಲವರ್ಧಿಸಿಕೊಂಡು ದಕ್ಷಿಣ ಓಮನ್ ಹಾಗೂ ಪಕ್ಕದ ಯಮೆನ್ ದೇಶದತ್ತ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಪರಿಣಾಮ ಮುಂದಿನ 48 ಗಂಟೆಗಳ ಕಾಲ ಕರ್ನಾಟಕ ಕರಾವಳಿ, ಕೊಂಕಣ ಮತ್ತು ಗೋವಾಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರ್ನಾಟಕ ಕರಾವಳಿಯಲ್ಲಿ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸೇರಿದಂತೆ ಯಾರೂ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಸೂಕ್ತ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಕರಾವಳಿಯ ಎಲ್ಲಾ ಬಂದರುಗಳಲ್ಲಿ ಎಚ್ಚರಿಕೆಯ ಸೂಚನೆಯಾಗಿ ನಂ.3ನ್ನು ಪ್ರದರ್ಶಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News