ಭಾರೀ ಮಳೆ: ತೀವ್ರಗೊಂಡ ಸೋಮೇಶ್ವರ ಕಡಲಿನಬ್ಬರ

Update: 2019-10-24 14:48 GMT

ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೋಮೇಶ್ವರ ಕಡಲಿನಬ್ಬರ ತೀವ್ರ ಗೊಂಡಿದ್ದು, ಇದರಿಂದ ಸೋಮೇಶ್ವರ ದೇವಸ್ಥಾನ ಸಮೀಪ ಮೋಹನ್ ಅವರ ಮನೆಯ ಗೋಡೆಗೆ ಹಾನಿಯಾಗಿದೆ. ದೇವಸ್ಥಾನದ ಸ್ವಲ್ಪ ಅಂತರದ ದೂರ ಇರುವ ಅಬ್ಬಾಸ್ ಮತ್ತು ಅಝೀಝ್ ಅವರ ಮನೆಯಂಗಳಕ್ಕೆ ನೀರು ಬಂದಿದೆ. ಇದರಿಂದ ಈ ಕುಟುಂಬದವರಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ.

ಅಬ್ಬಾಸ್ ಮತ್ತು ಅಝೀಝ್ ಅವರ ಮನೆ ಬಳಿ ತಡೆಗೋಡೆ ಇಲ್ಲದ ಕಾರಣ ತೀವ್ರ ಗೊಂಡ ಕಡಲ್ಕೊರೆತದ ಅಲೆ ಮನೆಯಂಗಳಕ್ಕೆ ಅಪ್ಪಳಿಸುತ್ತಿದೆ. ಝೌವುರ ಅವರ ಮನೆ ಅಪಾಯದಂಚಿನಲ್ಲಿದೆ.

ಉಳ್ಳಾಲ ನಗರ ಸಭಾ ವ್ಯಾಪ್ತಿ ಯ ಕೈಕೋ ಮೊಗವೀರಪಟ್ಣದಲ್ಲಿ ತೀವ್ರ ಗೊಂಡ ಕಡಲ್ಕೋರೆತದಿಂದ ತಾತ್ಕಾಲಿಕ ತಡೆಗೋಡೆ ಸಮುದ್ರ ಪಾಲಾಗಿವೆ. ಕೆಲವು ಮನೆಗಳು ಅಪಾಯದಲ್ಲಿವೆ.

ಎರಡು ತಿಂಗಳ ಹಿಂದೆ ವಿಪರೀತ ಮಳೆಗೆ ಉಚ್ಚಿಲ ಬೆಟಂಪಾಡಿ, ಪೆರಿಬೈಲ್‍ನಲ್ಲಿ ಕಡಲ್ಕೊರೆತ ತೀವ್ರಗೊಂಡು ರಸ್ತೆ ನೀರು ಪಾಲಾಗಿತ್ತು. ಅದೇ ಪರಿಸ್ಥಿತಿ ನಿನ್ನೆಯ ಮಳೆಗೆ ನಿರ್ಮಾಣವಾಗಿದೆ. ಸಮುದ್ರದ ಅಲೆಯ ನೀರು ರಸ್ತೆ ದಾಟಿ ಬಂದಿದೆ. ರಸ್ತೆಯಲ್ಲಿ ಸಂಚಾರ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 15 ಮನೆಗಳ ಅಂಗಳದಲ್ಲಿ ಸಮುದ್ರದ ನೀರು ತುಂಬಿದ್ದು ಅದನ್ನು  ಸೋಮೇಶ್ವರ ಪುರಸಭೆ ಜೆಸಿಬಿ ಮೂಲಕ ನೀರನ್ನು ಮತ್ತೆ ಸಮುದ್ರ ಸೇರುವಂತೆ ವ್ಯವಸ್ಥೆ ಮಾಡಿದೆ. ಉಚ್ಚಿಲ ಬೆಟ್ಟಂಪಾಡಿ ಸಮೀಪ ನಾಲ್ಕು ತೆಂಗಿನ ಮರಗಳು ಧಾರಾಶಾಹಿಯಾಗಿವೆ. ಉಚ್ಚಿಲ ಕಾಂತಪಣ್ಣ ಅವರ ಮನೆಗೆ ಅಲೆಗಳು ಹೊಡೆಯುತ್ತಿದೆ. ದೊಡ್ಡ ಮಟ್ಟದ ಹಾನಿ ಸಂಭವಿಸದ ಬಗ್ಗೆ ವರದಿಯಾಗಿಲ್ಲ. ಸ್ಥಳೀಯರಲ್ಲಿ ಮಾತ್ರ ಚಂಡಮಾರುತದ ಆತಂಕ ಕಾಡುತ್ತಿದೆ. ತಡೆಗೋಡೆ ನಿರ್ಮಾಣಕ್ಕೆ  ಕಲ್ಲುಗಳು ಬರುತ್ತಿದ್ದರೂ ತಡೆಗೋಡೆ ನಿರ್ಮಾಣ ಇನ್ನೂ ಆಗಿಲ್ಲ. ತಾತ್ಕಾಲಿಕ ತಡೆಗೋಡೆಯಿಂದ ಯಾವುದೇ ಪರಿಹಾರ ಕಾಣದೇ ಇರುವುದರಿಂದ ಶಾಶ್ವತ ತಡೆಗೋಡೆ ಮಾಡಿದರೆ ಸಮಸ್ಯೆ ಇತ್ಯರ್ಥ ಆಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ. 

ಐದು ಮನೆಗಳ ಸ್ಥಳಾಂತರಕ್ಕೆ ಸೂಚನೆ

ವಿಪರೀತ ಮಳೆಯಿಂದ ಕಡಲ್ಕೊರೆತ ತೀವ್ರಗೊಂಡಿರುವ ಉಚ್ಚಿಲ, ಪೆರಿಬೈಲ್, ಬೆಟ್ಟಂಪಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಚ್ಚಿಲ, ಬೆಟ್ಟಂಪಾಡಿ ಸಮುದ್ರ ಸಮೀಪ ಅಪಾಯದಲ್ಲಿರುವ ಐದು ಮನೆಗಳನ್ನು ಸ್ಥಳಾಂತರಿಸಲು ಶಾಸಕ ಖಾದರ್ ಸೂಚನೆ  ನೀಡಿದ್ದಾರೆ. ಈಗಾಗಲೆ ಕಡಲ್ಕೊರೆತ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಳೆ ಮತ್ತೆ ಮುಂದುವರಿಯುವ  ಸಾಧ್ಯತೆ ಇರುವುದರಿಂದ ಯಾವುದೇ ಅಪಾಯ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಾತ್ಕಲಿಕ ತಡೆಗೋಡೆ ಆಗುತ್ತಿದ್ದರೂ ಅದು ಸಮರ್ಪಕವಾಗಿ ಆಗದ ಕಾರಣದಿಂದ ಕಡಲ್ಕೊರೆತದ ಸಮಸ್ಯೆ ಇಲ್ಲಿ ಅಧಿಕವಾಗಿ ಕಾಣುತ್ತದೆ. ಶಾಶ್ವತ ಕಾಮಗಾರಿ ಎಡಿಬಿಯವರು ಮಾಡಬೇಕಾಗಿದ್ದು ಇದಕ್ಕೆ 124 ಕೋಟಿ ರೀ ವೆಚ್ಛ ತಲುಗಲಿದೆ. ಇದೇ ವೆಚ್ಛದಲ್ಲಿ ಎಡಿಬಿ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕಾಗಿದ್ದು,   ಈ ಬಗ್ಗೆ ಶಾಸಕ ಖಾದರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಸೂಚಿಸಿದ್ದಾರೆ.

20ಕೋಟಿ ವೆಚ್ಚದಲ್ಲಿ ತಡೆಗೋಡೆ ರಚನೆ

ಉಳ್ಳಾಲದಲ್ಲಿ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಡಲ್ಕೊರೆತ ಪ್ರದೇಶವಾಗಿರುವ,ಕೈಕೋ, ಹಿಲರಿಯನಗರ, ಮುಕಚೇರಿ ಕಡೆಗಳಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ರಚಿಸಲು ನಿರ್ಧಾರ ಈಗಾಗಲೇ ಆಗಿದೆ. ಈ ಬಗ್ಗೆ ಎಡಿಬಿಯವರ ಮೂಲಕ ತಡೆಗೋಡೆ ಕಾರ್ಯ ಶೀಘ್ರದಲ್ಲೇ ಆಗುವಂತೆ ವ್ಯವಸ್ಥೆ ಮಾಡಬೇಕು. ಈ ಬಾರಿಯ ಮಳೆಗೆ ದೊಡ್ಡಮಟ್ಟದ ಅನಾಹುತ ಆಗದಿದ್ದರೂ ಮುಂಂದೆ ಯಾವುದೇ ಅನಾಹುತ ಆಗದಂತೆ ಶೀಘ್ರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ  ಖಾದರ್ ಸೂಚಿಸಿದ್ದಾರೆ.

ಉಚ್ಚಿಲ, ಬೆಟ್ಟಂಪಾಡಿ, ಸೋಮೇಶ್ವರ ಕಡೆ ಯಾವುದೇ ಅನಾಹುತ ನಡೆಯದಂತೆ ಶಾಶ್ವತ ತಡೆಗೋಡೆ ಮಾಡಲು ಸೂಚಿಸಲಾಗಿದೆ. ಶಾಶ್ವತ ತಡೆಗೋಡೆ ಗೋಡೆ ಎಡಿಬಿಯವರು ಮಾಡಬೇಕು. ಇದಕ್ಕೆ 124 ಕೋಟಿ ಹಣ ಅಗತ್ಯ ಇದೆ. ಈ ಗ್ಗೆ ಎಡಿಬಿಯವರಲ್ಲಿ ಹೇಳಿದರೆ ನಮ್ಮ ಕೆಲಸ ಆಗಿದೆ ಎನ್ನುತ್ತಾರೆ. ಶಾಶ್ವತ ತಡೆಗೋಡೆ ಆಗಿದ್ದರೆ ಮತ್ತೆ ತಾತ್ಕಾಲಿಕ ತಡೆಗೋಡೆ ಅಗತ್ಯ ಇರುವುದಿಲ್ಲ.  ಈ ಬಗ್ಗೆ ಅಧಿಕಾರಿಗಳು ಸೂಕ್ತ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು. ಎಡಿಬಿಯವರ ಮೂಲಕ ಶಾಶ್ವತ ತಡೆಗೋಡೆ ಕೂಡಾ ನಿರ್ಮಾಣ ಶೀಘ್ರದಲ್ಲೇ ಆಗಬೇಕು. ಉಳ್ಳಾಲದ ಸಮಸ್ಯೆಯ ಬಗ್ಗೆ ಎಲ್ಲಾ ವಿಚಾರಗಳನ್ನು ಉಸ್ತುವಾರಿ ಸಚಿವರ ಗಮನ ಸೆಳೆದಿದ್ದೇನೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಸೆಳೆದು ಸೂಕ್ತ ಕ್ರಮ ಕೈಗೊಳ್ಳಬೇಕು.

-ಶಾಸಕ,ಖಾದರ್ 

ವಿಪರೀತ ಮಳೆಗೆ ಕಳೆದ ಮಂಗಳವಾರ ಕುಸಿದಿದ್ದ ಕಲ್ಲಾಪು ಪಟ್ಲ ಮುಖ್ಯ ರಸ್ತೆಯು ತಡೆಗೋಡೆ ಸಹಿತ  ರಸ್ತೆ ಅರ್ಧ ನೀರುಪಾಲಾಗಿದ್ದು, ಸಂಚಾರಕ್ಕೆ ಆಯೋಗ್ಯವಾಗಿದೆ. ಇದರಿಂದ ರಾಣಿಪು ಗಂಡಿ ಸಂಪರ್ಕಿಸುವ ರಸ್ತೆ ಅಸ್ತವ್ಯಸ್ತಗೊಂಡಿದೆ. ಪಟ್ಲ ತಖ್ವಾ ಮಸೀದಿ ಬಳಿ ಕೂಡಾ  ರಸ್ತೆ  ಕುಸಿದು ಅಪಾಯದಂಚಿನಲ್ಲಿವೆ.

ಈ  ರಸ್ತೆಯಲ್ಲಿ ಮರಳು ಲಾರಿ ನಿರಂತರ ಸಂಚಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯ ಒಂದು ಭಾಗದ ಡಾಮರು ಎದ್ದು ಹೋಗಿ ಹೊಂಡ  ನಿರ್ಮಾಣವಾಗಿದೆ. ಹೆಚ್ಚಾಗಿ ಲಾರಿ ಮತ್ತು ಇತರ ವಾಹನಗಳು ಹೊಂಡ ತಪ್ಪಿಸುವ ಸಲುವಾಗಿ ತಡೆಗೋಡೆ ಕಾಮಗಾರಿಗೆ ಹೊಂದಿಕೊಂಡು ಸಂಚರಿಸುತ್ತಿದ್ದ ಕಾರಣದಿಂಧ ರಸ್ತೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.  ಇದರಿಂದ ತಡೆಗೋಡೆ ಎರಡು ತಿಂಗಳ ಹಿಂದೆ ಬಿರುಕು ಬಿಟ್ಟಿದ್ದ ಸಂದರ್ಭ ಸ್ಥಳೀಯ ನಗರ ಸಭೆಯ ಕೌನ್ಸಿಲರ್  ಉಳ್ಳಾಲ ನಗರ ಸಭೆ ಮುಖ್ಯಾಧಿಕಾರಿ, ಜ್ಯೂನಿಯರ್ ಇಂಜಿನಿಯರ್ ಅವರಿಗೆ ಮನವಿ ಮೂಲಕ ಗಮನ ಸೆಳೆದಿದ್ದರು.ಆದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದ ಕಾರಣದಿಂದ ರಸ್ತೆ ಪೂರ್ಣವಾಗಿ ಹಾನಿಯಾಗಿದೆ.

ನಾಗರಿರಕ ಆಕ್ರೋಶ

ಕಲ್ಲಾಪುವಿನಿಂದ ಪಟ್ಲಕ್ಕೆ  ಹಾದುಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಲು ಮರಳು ಲಾರಿ ಸಂಚಾರವೇ ಕಾರಣ. ಇದನ್ನು ಮೊದಲು ನಿಲ್ಲಿಸುವ ವ್ಯವಸ್ಥೆ ಆಗಬೇಕಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೆ  ಈ ಬಗ್ಗೆ ಜನಪ್ರತಿನಿಂದಿಗಳ, ಅಧಿಕಾರಿಗಳ ಗಮನ ಸೆಳೆದಿದ್ದೇವೆ. ದಿನಕ್ಕೆ ನೂರಕ್ಕೂ ಅಧಿಕಮರಳು ಲಾರಿ ಸಂಚರಿಸುತ್ತವೆ. ಇದರಿಂದ ರಸ್ತೆ ಹಾಳಾಗಿ ಹೋಗಿದೆ. ರಸ್ತೆ ಕುಸಿದ ಮೇಲೆ ಇಲ್ಲಿನ ಜನರಿಗೆ ಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆರೋಪಿಸಿದರು.  ಘಟನಾ ಸ್ಥಳಕ್ಕೆ ಶಾಸಕಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

 ಈ ರಸ್ತೆಗೆ ತಡೆಗೋಡೆ ಕಟ್ಟಿ ರಸ್ತೆ ನಿರ್ಮಾಣ ಆಗಬೇಕು. ಆವರೆಗೆ ಬೇರೆ ರಸ್ತೆ ಬಳಕೆಮಾಡಿ ಸಂಚರಿಸುವಂತೆ ಶಾಸಕ ಖಾದರ್ ಸ್ಥಳೀಯರಿಗೆ ಸೂಚಿಸಿದ್ದಾರೆ. ರಸ್ತೆ ಬಹಳಷ್ಟು ಅಗತ್ಯ ಇರುವುದರಿಂದ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉಳ್ಳಾಲ ಕಡಲ್ಕೊರೆತೆ ಪರಿಹಾರಕ್ಕೆ ಸೂಕ್ತ  ಕ್ರಮ ಕೈಗೊಂಡಿದ್ದು, ಈಗಾಗಲೇ ಕಾಮಗಾರಿಗೆ  32 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ತುರ್ತು ಪರಿಹಾರಕ್ಕೆ ಬಂದರ್  ಮತ್ತು ಜಿಲ್ಲಾಧಿಕಾರಿಗಳನ್ನು ಕರೆಸಿ ಅವರ ಜತೆ  ತುರ್ತು ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಕಡಲ್ಕೊರೆತ ಪ್ರದೇಶವಾಗಿರುವ ಉಚ್ಚಿಲ, ಸೋಮೇಶ್ವರ ಕಡೆ ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದರು.

ತೊಂದರೆಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಡಿಬಿ ಅಧಿಕಾರಿಗಳಿಗೆ ನೋಟೀಸ್ ನೀಡುತ್ತೇನೆ. ಇದೂ ಅಲ್ಲದೇ 102 ಕೋಟಿ ರೂ ಅನುದಾನದ ಯೋಜನೆ ಬೇರೆ ಇದೆ.  ಈವರೆಗೆ ಕಡಲ್ಕೊರೆತ, ಅತಿವೃಷ್ಠಿಯಿಂದ ಮನೆ, ಆಶ್ರಯ ಕಳೆದು ಕೊಂಡು ತೊಂದರೆಗೊಳಗಾಗಿರುವ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News