ಎಂಆರ್‌ಪಿಎಲ್ ನೇಮಕಾತಿ ತಡೆಗೆ ಕೆಡಿಎ ಸೂಚನೆ

Update: 2019-10-24 16:10 GMT

ಮಂಗಳೂರು, ಅ.24: ಕೇಂದ್ರ ಸ್ವಾಮ್ಯದ ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಲಿ.) ಸಂಸ್ಥೆಯು ಹೊರಡಿಸಿರುವ ನೇಮಕಾತಿ ಆದೇಶ ತಡೆಹಿಡಿದು ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎಂಆರ್‌ಪಿಎಲ್ ನಿರ್ದೆಶಕರಿಗೆ ಗುರುವಾರ ಪತ್ರ ಬರೆದು ಸೂಚನೆ ನೀಡಿದೆ.

ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಎಂಆರ್‌ಪಿಎಲ್ ನೇಮಕಾತಿ ಪ್ರಕಟನೆ ಹೊರಡಿಸಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ನಡೆಸಿರುವ ಕೇಂದ್ರ ಸ್ವಾಮ್ಯದ ಉದ್ದಿಮೆಗಳು ಇಲ್ಲಿನ ಭೂಮಿ, ನೀರು, ವಿದ್ಯುತ್ ಹಾಗೂ ಮೂಲಭೂತ ಸೌಲಭ್ಯಗಳನ್ನು ಬಳಸಿ ಕೊಳ್ಳುತ್ತಿವೆ. ನೇಮಕಾತಿ ಸಂದರ್ಭ ಸ್ಥಳೀಯ ಕನ್ನಡಿಗರನ್ನು ಕಡೆಗಣಿಸಿರುವುದು ಗಮನಕ್ಕೆ ಬಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ತ್ರಿಭಾಷಾ ಸೂತ್ರದನ್ವಯ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಕೇಂದ್ರ ಸ್ವಾಮ್ಯದ ಉದ್ದಿಮೆಗಳು ಡಾ.ಸರೋಜಿನಿ ಮಹಿಷಿ ವರದಿಯನ್ವಯ ಸ್ಥಳೀಯರಿಗೆ ಆದ್ಯತೆಯ ಮೇಲೆ ಉದ್ಯೋಗಾವಕಾಶ ಕಲ್ಪಿಸಬೇಕಾಗುತ್ತದೆ. ಆದರೆ ಎಂಆರ್‌ಪಿಎಲ್ ಪ್ರಸ್ತುತ ಹೊರಡಿಸಿರುವ ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಿಲ್ಲ. ನೇಮಕಾತಿ ಪ್ರಕಟನೆಯನ್ನು ತಕ್ಷಣದಿಂದಲೇ ತಡೆಹಿಡಿಯಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಎಂಆರ್‌ಪಿಎಲ್ ಸಂಸ್ಥೆಯು ಈ ಹಿಂದಿನ ವರ್ಷಗಳಲ್ಲಿ ನೇಮಕಾತಿ ಸಂದರ್ಭ ಆದ್ಯತೆ ಮೇರೆಗೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿತ್ತು. ಆದರೆ, ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲೂ ಅಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿರುವುದು ಕಂಡುಬಂದಿದೆ. ಆದರೆ, ಈಗಿನ ನೇಮಕಾತಿ ಪ್ರಕಟನೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ಪ್ರಾಧಿಕಾರಿ ಗಂಭೀರವಾಗಿ ಪರಿಗಣಿಸಿದೆ. ಸಂಸ್ಥೆಯು ಶೀಘ್ರಗತಿಯಲ್ಲಿ ಕ್ರಮ ಕೈಗೊಂಡು ಪ್ರಾಧಿಕಾರಕ್ಕೆ ತಿಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಟಿ.ಎಸ್. ನಾಗಾಭರಣ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರಿಗೆ ಪತ್ರ ಬರೆದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News