ಸತ್ಕಾರ್ಯ ಮಾಡಿರುವ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಮಾನ್ಯತೆ ಸಿಗಬೇಕು: ಡಿಸಿಎಂ ಅಶ್ವಥ್ ನಾರಾಯಣ

Update: 2019-10-25 11:26 GMT

ಉಡುಪಿ, ಅ. 25: ಅನರ್ಹ ಶಾಸಕರು ಕೆಟ್ಟ ಸಮ್ಮಿಶ್ರ ಸರಕಾರ ಪತನಗೊಳಿಸಲು ಮುಖ್ಯ ಕಾರಣಕರ್ತರು. ಸಮಾಜದ ರಕ್ಷಣೆಗೆ ಬಂದ ಇವರು, ಸಮಾಜದಲ್ಲಿ ಬಹಳ ದೊಡ್ಡ ವ್ಯಾತ್ಯಾಸವನ್ನು ಮಾಡಿದ್ದಾರೆ. ನಿಜಕ್ಕೂ ಸತ್ಕಾರ್ಯ ಮಾಡಿರುವ ಇವರಿಗೆ ಮಾನ್ಯತೆ ಸಿಗದಿದ್ದರೆ ಮತ್ತೆ ಯಾರಿಗೆ ಸಿಗಬೇಕು ಎಂದು ರಾಜ್ಯ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಪ್ರಶ್ನಿಸಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಛಿಯಲ್ಲಿ ಮಾತ ನಾಡಿದ ಅವರು, ಅನರ್ಹ ಶಾಸಕರು ಪಕ್ಷ ಇನ್ನು ಸೇರಿಲ್ಲ. ಅವರು ಪಕ್ಷ ಸೇರಿದ ನಂತರ ನಮ್ಮ ಪಕ್ಷ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ನೀಡಬಾರದು ಎಂಬುದರ ಬಗ್ಗೆ ನಿಶ್ಚಯ ಮಾಡುತ್ತದೆ. ಆದುದರಿಂದ ಅವರು ಪಕ್ಷ ಸೇರದೆ ಟಿಕೆಟ್ ಕೊಡುವ ಬಗ್ಗೆ ಹೇಳಲು ಆಗುವುದಿಲ್ಲ ಎಂದರು.

ಅನರ್ಹ ಶಾಸಕರ ಕುರಿತ ಸವದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಅನರ್ಹ ಶಾಸಕರು ಇನ್ನು ಕೂಡ ನಮ್ಮ ಪಕ್ಷ ಸೇರಿಲ್ಲ. ಸೇರಿದ ನಂತರ ಮುಂದೆ ವಿಚಾರ ಮಾಡಲಾಗುವುದು. ಆ ಬಗ್ಗೆ ಪಕ್ಷದ ನಾಯಕರು ನಿರ್ಣಯ ತೆಗೆದು ಕೊಳ್ಳುತ್ತಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ರುವುದರಿಂದ ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದು ಹೇಳಿದರು.

ರಾಜ್ಯ ಉಪಚುನಾವಣೆಯಲ್ಲಿ ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ. ಇಂದು ನಮ್ಮ ಎದುರಾಳಿ ಪಕ್ಷಗಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿವೆ. ಅವರಲ್ಲಿಯೇ ಸಾಕಷ್ಟು ಒಳ ಜಗಳಗಳು ನಡೆಯುತ್ತಿವೆ. ಅವರು ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆಯೇ ಹೊರತು ಉತ್ತಮ ಆಡಳಿತದ ಆಧಾರದಲ್ಲಿ ಮತ ಕೇಳುವ ಅಥವಾ ಜನರ ಬೆಂಬಲ ಪಡೆಯುವುದರಲ್ಲಿ ತೊಡಗಿಸಿಕೊಂಡಿಲ್ಲ. ಕೇವಲ ಸತ್ಯಕ್ಕೆ ದೂರವಾದ ಹೇಳಿಕೆ ನೀಡುವ ಮೂಲಕ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.

ಡಿಕೆಶಿ ಎಲ್ಲೂ ಸಲ್ಲದವರು: ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಡಿ.ಕೆ.ಶಿವಕುಮಾರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದ್ದ ಸರಕಾರವನ್ನು ಉಳಿಸಲು ಆಗದಿದ್ದವರು ಇನ್ನು ಏನನ್ನು ಮಾಡಲು ಸಾಧ್ಯ ಇದೆ. ಇದು ಇಲಿ ಬಂದರೆ ಹುಲಿ ಬಂತು ಎನ್ನುವ ರೀತಿಯಲ್ಲಿ ಆಗಿದೆ. ಆದುದರಿಂದ ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯ ಇಲ್ಲ. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಾರೆಯೇ ಎಂದು ಟೀಕಿಸಿದರು.

ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆಯೇ ಎಂಬ ಆರೋಪದ ಬಗ್ಗೆ ಪ್ರತ್ರಿಯಿಕಿಸಿದ ಅವರು, ಭ್ರಷ್ಟಾಚಾರ ರಹಿತ ಸಮಾಜ ಹಾಗೂ ವ್ಯವಸ್ಥೆ ಕಟ್ಟು ವುದು ನಮ್ಮ ಚಿಂತನೆಯಾಗಿದೆ. ಈ ದಾರಿಯಲ್ಲಿ ಸರಕಾರ ಸಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ತಂದು ಪಾರದರ್ಶಕ ವಾದ ವ್ಯವಸ್ಥೆ ಕಟ್ಟಲು ಹೊರಟಿದ್ದೇವೆ. ಹೀಗೆ ಭ್ರಷ್ಟಾಚಾರ ನಡೆಸಿದವರು ಒಂದು ಜಾತಿಯ ಅಡಿ ಯಲ್ಲಿ ಹೋಗಿ ರಕ್ಷಣೆ ಪಡೆಯುವುದು ಸರಿ ಇಲ್ಲ. ನಾವು ವ್ಯಕ್ತಿಗತವಾಗಿ ಆಡಳಿತ ಮಾಡುತ್ತಿಲ್ಲ. ಉತ್ತಮ ಸಮಾಜ, ಸದೃಡ ಸಮಾಜ ಕಟ್ಟಲು ನಾವು ಬದ್ಧರಾಗಿ ದ್ದೇವೆ ಎಂದು ತಿಳಿಸಿದರು.

ವಿರೋಧ ಪಕ್ಷಗಳಿಗೆ ಅತಿವೃಷ್ಠಿ ನಿರ್ವಹಣೆಯಲ್ಲಿ ಯಾವುದೇ ತಪ್ಪ್ಪು ಕಂಡು ಹಿಡಿಯಲು ನಾವು ಅವಕಾಶ ಕೊಟ್ಟಿಲ್ಲ. ಎಲ್ಲ ಜಿಲ್ಲೆಗಳ ಪ್ರತಿ ಮನೆ ಮತ್ತು ವ್ಯಕ್ತಿಗೂ ಕೂಡ ಪರಿಹಾರದ ಹಣ ತಲುಪಿಸಿದ್ದೇವೆ. ಪುನವರ್ಸತಿ ಕಾಮಗಾರಿ ಯಲ್ಲಿ ಕೆಲವು ಸವಾಲುಗಳಿರುವುದರಿಂದ ಮಳೆಯಿಂದ ಹಾನಿಯಾದ ಪ್ರದೇಶ ವನ್ನು ರಾತ್ರೋರಾತ್ರಿ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕೆ ಕನಿಷ್ಠ ಒಂದರಿಂದ ಎರಡು ವರ್ಷ ಬೇಕಾಗುತ್ತದೆ. ಈ ಸಂಬಂಧ ಈಗಾಗಲೇ ಸಾಕಷ್ಟು ಹಣ ಮಂಜೂರು ಮಾಡಿ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ದಿನಕರ ಬಾಬು, ಶೀಲಾ ಕೆ.ಶೆಟ್ಟಿ, ಯಶ್ಪಾಲ್ ಸುವರ್ಣ ಮೊದಲಾದ ವರು ಉಪಸ್ಥಿತರಿದ್ದರು.

ಟಿಪ್ಪು ಜಯಂತಿ ಆಚರಿಸುವವರು ನಮ್ಮವರಲ್ಲ

ಬಚ್ಚೆಗೌಡರ ಮಗ ಶರತ್ ಬಚ್ಚೆಗೌಡ ಟಿಪ್ಪು ಸುಲ್ತಾನ್ ಆಚರಣೆ ಮಾಡುವುದಾಗಿ ಹೇಳಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಶ್ವಥ್ ನಾರಾಯಣ, ನಮ್ಮ ಪಕ್ಷದ ಯಾರೇ ನಾಯಕರು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ ಇಲ್ಲದವರು ಮಾತ್ರ ಟಿಪ್ಪು ಜಯಂತಿ ಆಚರಣೆ ಮಾಡಲು ಸಾಧ್ಯ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News