ಸುರತ್ಕಲ್ ಟೋಲ್ ಗುತ್ತಿಗೆ ನವೀಕರಿಸದಿರಲು ಹೋರಾಟ ಸಮಿತಿ ಆಗ್ರಹ

Update: 2019-10-25 12:31 GMT

ಮಂಗಳೂರು, ಅ. 25: ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್ (ಮುಕ್ಕ) ಅಕ್ರಮ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನವೆಂಬರ್ 15ಕ್ಕೆ ಮುಕ್ತಾಯಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆಯನ್ನು ನವೀಕರಿಸದೆ ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡ ತೀರ್ಮಾನದಂತೆ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸಬೇಕು. ಅಲ್ಲದೆ ಹೆದ್ದಾರಿ ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್, ನಂತೂರು ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕು, ಸಂಚಾರಕ್ಕೆ ಅಯೋಗ್ಯಗೊಂಡಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಐದು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರು ತಿಂಗಳ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಕೇಂದ್ರವನ್ನು ಜನತೆಯ ಸತತ ಪ್ರತಿಭಟನೆಯ ನಂತರವೂ ಅಕ್ರಮವಾಗಿ ಮುಂದುವರಿಸಲಾಗುತ್ತಿದೆ. ಜನತೆಯ ಪ್ರತಿಭಟನೆ ತೀವ್ರಗೊಂಡ ನಂತರ 2018ರ ಜನವರಿಯಲ್ಲಿ ಸುರತ್ಕಲ್ ಟೋಲ್ ಕೇಂದ್ರವನ್ನು ತಕ್ಷಣವೇ ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ಅಧಿಕೃತ ತೀರ್ಮಾನವನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿದ್ದರೂ ಕಳೆದ ಎರಡು ವರ್ಷಗಳಿಂದ ಮೂರು ತಿಂಗಳು, ಆರು ತಿಂಗಳು, ಒಂದು ವರ್ಷದ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನೀಡಲಾಗುತ್ತಿದೆ. ಇದು ಅಕ್ರಮವಲ್ಲದೆ ಸ್ವತಃ ಹೆದ್ದಾರಿ ಪ್ರಾಧಿಕಾರ ತನ್ನ ತೀರ್ಮಾವನ್ನೇ ಉಲ್ಲಂಘಿಸಿ ಜನತೆಗೆ ಮಾಡುವ ಅನ್ಯಾಯವಾಗಿದೆ ಎಂದು ಸಮಿತಿ ಆರೋಪಿಸಿದೆ.

ಈ ರೀತಿಯ ಟೋಲ್ ಸಂಗ್ರಹದ ವಿರುದ್ಧ ಹಾಗೂ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜೊತೆಗೆ ವಿಲೀನಗೊಳಿಸುವ ನಿರ್ಧಾರವನ್ನು ತಕ್ಷಣ ಜಾರಿಗೊಳಿಸಬೇಕು, ಹೆದ್ದಾರಿ ಗುಂಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸತತ ಹೋರಾಟ ನಡೆಸುತ್ತಿದೆ. ಕಳೆದ ವರ್ಷದ ಆಗಸ್ಟ್ ನಿಂದ ಪಾದಯಾತ್ರೆ, ಪ್ರತಿಭಟನಾ ಸಭೆ, 11 ದಿನಗಳ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ಸಹಿತ ಸತತ ಪ್ರತಿಭಟನೆಗಳೂ ನಡೆದಿವೆ. ಈ ಪ್ರಬಲ ಜನ ಹೋರಾಟಗಳ ಸಂದರ್ಭ ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಹೆದ್ದಾರಿ ಸಚಿವರ ಆಪ್ತ ಕಾರ್ಯದರ್ಶಿ ಸುರತ್ಕಲ್ ಟೋಲ್ ಕೇಂದ್ರ ಎತ್ತಂಗಡಿಯ ತೀರ್ಮಾನಕ್ಕೆ ಬದ್ಧ ಎಂದು ಬಹಿರಂಗವಾಗಿ ತಿಳಿಸಿದ್ದರು. ಆದರೂ ಹೆದ್ದಾರಿ ಪ್ರಾಧಿಕಾರ ತನ್ನ ತೀರ್ಮಾನವನ್ನು ಜಾರಿಗೊಳಿಸದೆ ಸುರತ್ಕಲ್ ಅಕ್ರಮ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹವನ್ನು ನಿಯಮ ಬಾಹಿರವಾಗಿ ಮುಂದುವರಿಸಿದೆ. ನ. 15ಕ್ಕೆ ಟೋಲ್ ಸಂಗ್ರಹದ ಗುತ್ತಿಗೆ ಅವಧಿ ಮುಗಿಯುತ್ತದೆ. ಈ ಬಾರಿ ಯಾವುದೇ ಕಾರಣಕ್ಕೂ ಗುತ್ತಿಗೆಯನ್ನು ನವೀಕರಿಸುವುದು ಅಥವಾ ಹೊಸದಾಗಿ ಟೋಲ್ ಸಂಗ್ರಹ ಗುತ್ತಿಗೆಗೆ ಟೆಂಡರ್ ಕರೆಯುವುದು ಹೀಗೆ ಯಾವುದನ್ನೂ ಮಾಡದೆ, ತಾತ್ಕಾಲಿಕ ನೆಲೆಯ ಟೋಲ್ ಕೇಂದ್ರವನ್ನು ಮುಚ್ಚಬೇಕು ಎಂದು ಸಮಿತಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಹೋರಾಟ ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ನಾಗರಿಕ ಸಮಿತಿ ಕುಳಾಯಿ ಇದರ ಅಧ್ಯಕ್ಷ ಭರತ್ ಶೆಟ್ಟಿ ಕುಳಾಯಿ, ಗಂಗಾಧರ ಭಂಜನ್, ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್, ಹೋರಾಟ ಸಮಿತಿ ಪ್ರಮುಖರಾದ ಶ್ರೀನಾಥ್ ಕುಲಾಲ್, ನಿತಿನ್ ಬಂಗೇರ, ಅಝ್ಮಲ್ ಅಹ್ಮದ್, ಜನಾರ್ದನ ಸಾಲ್ಯಾನ್ ಕುಳಾಯಿ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News