ತೀವ್ರಗೊಂಡ ಕಡಲ ಅಬ್ಬರ: ಹೆಜಮಾಡಿಯಲ್ಲಿ ಉಪ್ಪು ನೀರು ನುಗ್ಗಿ ಬೆಳೆ ಹಾನಿ

Update: 2019-10-25 17:28 GMT

ಕಾಪು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅರಬ್ಬೀ ಸಮುದ್ರ ಪ್ರಕ್ಷುಬ್ದಗೊಂಡಿದೆ. ಇದರಿಮದ ಹೆಜಮಾಡಿಯಲ್ಲಿ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ ಕಾರಣ ಬೆಳೆ ಹಾನಿಯಾಗಿದೆ.

ಶಾಂಭವಿ ಹೊಳೆಯಲ್ಲಿ ಕಡಲ ನೀರು ಹೆಜಮಾಡಿ ಗ್ರಾಮದ ಕಡಲ ತಡಿಯ ನಡಿಕುದ್ರು, ಪರಪಟ್ಟ, ಕೊಪ್ಪಲಗಳಲ್ಲಿ ಉಪ್ಪುನೀರು ನುಗ್ಗಿ ಭತ್ತದ ಬೆಳೆ ಹಾನಿಯಾಗಿದೆ. ಸ್ಥಳಕ್ಕೆ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್‍ಐ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಜಮಾಡಿ ಗ್ರಾಮ ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕೃಷಿಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಾಮನ ಕೋಟ್ಯಾನ್ ನಡಿಕುದ್ರು ಇಲ್ಲಿನ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತಂದರು.

ಈ ಭಾಗಗಳಲ್ಲಿ ಕೆಲವು ಕಡೆ ಭತ್ತದ ಕಟಾವು ನಡೆದಿದ್ದು, ತರಕಾರಿ ಬೆಳೆ ಬೆಳೆಯಲು ನಿರ್ಧರಿಸಲಾಗಿತ್ತು. ಇದೀಗ ಉಪ್ಪು ನೀರು ನುಗ್ಗಿದ ಪರಿಣಾಮ ತರಕಾರಿ ಬೆಳೆ ಅಸಾಧ್ಯವಾಗಿದೆ ಎಂದು ವಾಮನ ಕೋಟ್ಯಾನ್ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದಲೂ ಸುರಿದ ತೀವ್ರ ಮಳೆಯಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕಾಪು ಲೈಟ್ ಹೌಸ್ ಬಳಿ ಸಮುದ್ರ ತೀವ್ರಗೊಂಡಿದೆ. ಪಡುಬಿದ್ರಿಯ ಕಾಮಗಾರಿ ನಡೆಯುತ್ತಿರುವ ಬ್ಲೂ ಫ್ಲ್ಯಾಗ್ ಬೀಚ್ ಪರಿಸರದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ.

ಎರಡು ಮನೆಗಳಿಗೆ ಹಾನಿ: ಕಾಪು ತಾಲ್ಲೂಕಿನ ಬಡಾ ಗ್ರಾಮದ ಪುರುಷೋತ್ತಮ ಕೋಟ್ಯಾನ್ ಇವರ ಮನೆಗೆ ಮರ ಬಿದ್ದು, ಸುಮಾರು 50ಸಾವಿರ ರೂ. ನಷ್ಟ ಉಂಟಾಗಿದೆ. ಪಡು ಗ್ರಾಮದ ಶಾಂತರಾಮ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು, ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News