ರಾಜೀವ್‌ ಗಾಂಧಿ ಆಸ್ಪತ್ರೆಗೆ ‘ಕಾಯಕಲ್ಪ’ ಪ್ರಶಸ್ತಿ

Update: 2019-10-25 18:15 GMT

ಬೆಂಗಳೂರು, ಅ.25: ರಾಜ್ಯ ಸರಕಾರದಿಂದ ಸ್ವಚ್ಛತೆಗಾಗಿ ನೀಡಲಾಗುವ ‘ಕಾಯಕಲ್ಪ ಪ್ರಶಸ್ತಿ’ಯನ್ನು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಪಡೆದುಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ನಾಗರಾಜು ಹೇಳಿದರು.

ಶುಕ್ರವಾರ ನಗರದ ಹೊಸೂರು ರಸ್ತೆಯ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಹಮ್ಮಿಕೊಂಡಿದ್ದ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛ ಕಾರ್ಯಕ್ರಮ ಹಾಗೂ ಪರಿಸರ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜಧಾನಿ ಬೆಂಗಳೂರಿನ ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳ ಪೈಕಿ, ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಈ ಬಾರಿ ಕಾಯಕಲ್ಪಪ್ರಶಸ್ತಿ ಸಂದಿದ್ದು, ಅನುದಾನವೂ ಬಂದಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ವಸ್ತುಗಳ ಉಪಯೋಗಿಸುವುದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದರು.

ಎರಡು ದಿನಗಳ ಕಾಲ ಕಸ ಕೊಳೆಯುವುದರಿಂದ ಅದರೊಳಗೆ ನಾನಾ ಬಗೆಯ ವೈರಾಣುಗಳು ಉತ್ಪತ್ತಿಯಾಗುತ್ತವೆ. ಕೊಳೆತ ಕಸದ ಮೇಲೆ ಮಳೆ ನೀರು ಬೀಳುವುದರಿಂದ ತ್ಯಾಜ್ಯದಿಂದ ಉತ್ಪತ್ತಿಯಾದ ವೈರಾಣುಗಳು ಕೊಳಚೆಯೊಂದಿಗೆ ಎಲ್ಲೆಂದರಲ್ಲಿ ಹರಿಯುತ್ತವೆ. ಈ ವೈರಾಣುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದರು.

ತ್ಯಾಜ್ಯದಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಎಲ್ಲೆಂದರಲ್ಲಿ ದಿನನಿತ್ಯ ರಾಶಿ ಬೀಳುವ ಕಸದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಸಂಗ್ರಹವಾಗಿರುವ ತ್ಯಾಜ್ಯದಿಂದ ಹರಡುವ ಕೆಟ್ಟ ವಾಸನೆಯು ಆಸ್ತಮಾ ಹಾಗೂ ಅಲರ್ಜಿಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಲಿದೆ ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಸಿಬ್ಬಂದಿ ವರ್ಗ, ಆಸ್ಪತ್ರೆ ಆವರಣವನ್ನು ಸ್ವತಃ ಸ್ವಚ್ಛಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News