ನಗರ ಪಾಲಿಕೆ ಚುನಾವಣೆ ವಿಳಂಬಕ್ಕೆ ಬಿಜೆಪಿ ಕಾರಣ: ಐವನ್ ಡಿಸೋಜ ಆರೋಪ

Update: 2019-10-26 12:23 GMT

ಮಂಗಳೂರು, ಅ.26: ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯುವ ಮೊದಲು ಚುನಾವಣೆ ನಡೆಸಬೇಕೆಂಬ ನಿಯಮವಿದ್ದರೂ ಬಿಜೆಪಿಯಿಂದಾಗಿ ಸುಮಾರು ಏಳು ತಿಂಗಳ ಬಳಿಕ ಚುನಾವಣೆ ನಡೆಯುತ್ತಿದೆ ಎಂದು ಐವನ್ ಡಿಸೋಜ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೀಸಲಾತಿ ಪ್ರಶ್ನಿಸಿ ಬಿಜೆಪಿ ತಕರಾರು ಎಬ್ಬಿಸಿ ನ್ಯಾಯಾಲಯಕ್ಕೆ ಹೋದ ಕಾರಣ ಚುನಾವಣೆ ವಿಳಂಬವಾಯಿತು ಎಂದರು.

ಬಿಜೆಪಿಯ ಆಕ್ಷೇಪವನ್ನು ವಿಭಾಗೀಯ ಪೀಠ, ಹೈಕೋರ್ಟ್ ಕೂಡಾ ತಳ್ಳಿ ಹಾಕಿತ್ತು. ಅದಾಗ್ಯೂ ಮತ್ತೆ ಸುಪ್ರೀಂ ಕೋರ್ಟ್ ಕೂಡಾ ಅರ್ಜಿಯನ್ನು ತಳ್ಳಿ ಹಾಕಿದೆ. ಈ ಮೂಲಕ ಬಿಜೆಪಿ ಪ್ರಜಾತಂತ್ರದ ಮೇಲೆ ನಂಬಿಕೆ ಇಲ್ಲದಂತೆ ವರ್ತಿಸಿದೆ. ಮೀಸಲಾತಿಯು ಶೇ. 50ರಷ್ಟು ಮಹಿಳೆಯರಿಗೆ, ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಿ ಸಂವಿಧಾನದ ಆಶದಯಂತೆ ಪ್ರಕಟವಾಗಿದ್ದರೂ ಬಿಜೆಪಿಗೆ ತಮ್ಮ ಅಭ್ಯರ್ಥಿಗಳಿಗೆ ಬೇಕಾದಲ್ಲಿ ಅವಕಾಶ ಇಲ್ಲ ಎಂದು ಹೇಳಿ ಮೀಸಲಾತಿಯನ್ನು ಪ್ರಶ್ನಿಸಿತ್ತು. ಹಾಗಾಗಿ ಇದೀಗ ಸುಮಾರು ಏಳು ತಿಂಗಳ ಕಾಲ ಚುನಾವಣೆ ತಡವಾಗಿರುವುದಕ್ಕೆ ಬಿಜೆಪಿಯೇ ಕಾರಣ ಎಂದವರು ಹೇಳಿದರು.

ಮನಪಾದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನೀಡಿದೆ. ಕುಡಿಯುವ ನೀರಿನ ಪೂರೈಕೆ, ತುಂಬೆ ಕಿಂಡಿ ಅಣೆಕಟ್ಟು, ಪ್ರೀಮಿಯಂ ಎಫ್‌ಎಆರ್‌ನ ನಿಧಿಯ ಸದ್ಬಳಕೆ, 10 ನೂತನ ಮಾರುಕಟ್ಟೆಗಳು ಸೇರಿದಂತೆ ನಗರದ ರಸ್ತೆಗಳನ್ನು ಡಾಮರೀಕರಣಗೊಳಿಸುವ ಕಾರ್ಯ ಮಾಡಲಾಗಿದೆ ಎಂದವರು ಹೇಳಿದರು. ಚುನಾವಣೆಯಲ್ಲಿ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಕೆಪಿಸಿಸಿಯ ಐದು ವೀಕ್ಷಕರು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದಾರೆ. 60 ವಾರ್ಡ್‌ಗಳಿಗೆ 250ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆಯ್ಕೆ ನಡೆದಾಕ್ಷಣ ಮನೆ ಮನೆ ಭೇಟಿಯ ಜತೆ ಕಾರ್ನರ್ ಮೀಟಿಂಗ್‌ಗಳ ಮೂಲಕ ತಳ ಮಟ್ಟದಲ್ಲಿ ಜನರನ್ನು ತಲುಪಲಾಗುವುದು ಎಂದು ಅವರು ಹೇಳಿದರು.

ತುಂಬೆ ಅಣೆಕಟ್ಟು ಬಗ್ಗೆ ಬಿಜೆಪಿಯಿಂದ ತಪ್ಪು ಮಾಹಿತಿ-ಜರ್ಚೆಗೆ ಸಿದ್ಧ

ತುಂಬೆ ನೂತನ ಅಣೆಕಟ್ಟಿನ ಬಗ್ಗೆ ತಪ್ಪು ಮಾಹಿತಿಯ ಮೂಲಕ ಬಿಜೆಪಿ ಜನರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ. 2007ರಲ್ಲಿ ಶಂಕರ್ ಭಟ್ ಮೇಯರ್ ಆಗಿದ್ದಾಗ ಅಣೆಕಟ್ಟನ್ನು ಏಳು ಮೀಟರ್‌ಗೆ ಎತ್ತರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ಮೀಟರ್ ಕೂಡಾ ಏರಿಕೆ ಮಾಡಲಾಗಿರಲಿಲ್ಲ. 14 ಕೋಟಿ ರೂ.ಗಳ ಯೋಜನೆ ನನೆಗುದಿಗೆ ಬಿದ್ದ ಕಾರಣ ಕೊನೆಗೆ 70 ಕೋಟಿ ರೂ.ಗೆ ಏರಿಕೆಯಾಗಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಅವಧಿಯಲ್ಲಿ ಅಗತ್ಯ ಹಣವನ್ನು ಒದಗಿಸಿ ಅಣೆಕಟ್ಟು ಜನಸಾಮಾನ್ಯರ ಬಳಕೆಗೆ ಅನುವು ಮಾಡಲಾಯಿತು. ಹಾಗಾಗಿ ಬಿಜೆಪಿ ಸುಳ್ಳು ಹೇಳುವುದು ಬೇಡ. ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಲಿ

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು 2017ರ ಡಿಸೆಂಬರ್ 22ರಂದು ನೀಡಿದ ಲಿಕಿತ ಉತ್ತರದಲ್ಲಿ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಿದ್ದರು. ಆದರೆ ಅಡಿಕೆ ಕ್ಯಾನ್ಸರ್‌ಕಾರವಲ್ಲ ಎಂಬ ಬಗ್ಗೆ ಯಾವುದೇ ವರದಿಯನ್ನು ಕೇಂದ್ರದಿಂದ ನೀಡಲಾಗಿಲ್ಲ. ಅದನ್ನು ಮಾಡುವ ಮೂಲಕ ಅಡಿಕೆ ಬೆಳೆಗಾರರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಡಿಕೆ ಮಂಡಳಿಯನ್ನು ಸ್ಥಾಪಿಸಲು ಬಾಗಲೋಕೆಟಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯು ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಯಕರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನಝೀರ್ ಬಜಾಲ್, ನಿತ್ಯಾನಂದ ಶೆಟ್ಟಿ, ಜಯಶೀಲ ಅಡ್ಯಂತಾಯ, ಪಿಯುಸ್ ಮೊಂತೆರೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News