ಭಾರೀ ಮಳೆಯಿಂದ ಸಂಕಷ್ಟದಲ್ಲಿ ಜಿಲ್ಲೆಯ ರೈತ: ಪರಿಹಾರಕ್ಕೆ ಉಡುಪಿ ಜಿಲ್ಲಾ ಭಾಕಿಸಂ ಆಗ್ರಹ

Update: 2019-10-26 14:37 GMT

ಉಡುಪಿ, ಅ.26: ಮಳೆಗಾಲ ವಿಳಂಬವಾಗಿ ಜಿಲ್ಲೆಗೆ ಕಾಲಿರಿಸಿದರೂ, ನಂತರ ಅತಿಯಾಗಿ ಸುರಿದ ಮಳೆಯಿಂದ ತನ್ನ ಕೃಷಿ ಹಾಗೂ ತೋಟಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಿದ್ದ ರೈತನಿಗೆ, ಈಗ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಳೆದು ನಿಂತ ಪೈರನ್ನು ಕಾಪಾಡಿ ಕೊಳ್ಳುವುದು ಕಷ್ಟದ ಕೆಲಸವಾಗಿದೆ ಎಂದು ಉಡುಪಿ ಜಿಲ್ಲಾ ಭಾಕಿಸಂ ಹೇಳಿದೆ.

ಅಕ್ಟೋಬರ್ ತಿಂಗಳಲ್ಲಿ ಭತ್ತದ ಗದ್ದೆಗಳು ಕಟಾವಾಗಿ ಧಾನ್ಯಗಳ ಬಿತ್ತನೆ ತರಕಾರಿ ಗಿಡಗಳ ನಾಟಿ ಹಾಗೂ ಅಡಿಕೆ ಬೆಳೆಗಾರರೂ ಹಣ್ಣಾದ ಅಡಿಕೆಗಳನ್ನು ಕೊಯ್ದು ಒಣಗಿಸುವ ಕೆಲಸಗಳು ಪ್ರಾರಂಭವಾಗಬೇಕಿದ್ದ ಸಮಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಭಾಕಿಸಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಒಂದೆರಡು ದಿನಗಳಲ್ಲಿ ನಿಲ್ಲಬಹುದೆಂದು ತಿಳಿದಿದ್ದ ಮಳೆ ವಾರವಾದರೂ ನಿಲ್ಲುತ್ತಿಲ್ಲ. ತೆನೆ ತುಂಬಿ ನಿಂತಿದ್ದ ಭತ್ತದ ಪೈರು ಗದ್ದೆಗಳಲ್ಲಿ ಅಡ್ಡಲಾಗಿ ಮಲಗಿವೆ. ಕಟಾವಿಗೆ ಯಂತ್ರಗಳು ರೆಡಿ ಇದ್ದರೂ ಮಲಗಿರುವ ಭತ್ತದ ಪೈರನ್ನು ಕೊಯ್ಯಲು ಸಾಧ್ಯವಾಗದ ರೀತಿಯಲ್ಲಿದೆ. ಗದ್ದೆಗಳಲ್ಲಿ ತುಂಬಿರುವ ನೀರು ಇಳಿದು ಒಣಗಲು ವಾರಗಳೇ ಬೇಕು. ಕಳೆದ ಅನೇಕ ವರ್ಷಗಳ ರೈತರ ಅನುಭವದಲ್ಲಿ ಈ ರೀತಿ ನಿರಂತರ ಮಳೆ ಬಂದದ್ದು ಇಲ್ಲವೇ ಇಲ್ಲ. ಮೊದಲೇ ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಕಡಿಮೆಯಾಗುತ್ತಿರುವ ಕರಾವಳಿಯಲ್ಲಿ ಅಕಾಲಿಕ ಮಳೆ ಕೃಷಿಕನ ಆತ್ಮಸ್ಥೈರ್ಯವನ್ನೆ ನಾಶಮಾಡಿದೆ. ಇದಕ್ಕೆ ಸರಕಾರ ಜಿಲ್ಲಾಡಳಿತದ ಮೂಲಕ ಸಮೀಕ್ಷೆ ನಡೆಸಿ ನೈಜ್ಯ ನಷ್ಟದ ಆಧಾರದಲ್ಲಿ ರೈತರಿಗೆ ಪರಿಹಾರ ನೀಡಬೇಕು ಎಂದು ಭಾಕಿಸಂ ಸರಕಾರವನ್ನು ಆಗ್ರಹಿಸಿದೆ.

ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಅಕಾಲಿಕ ಮಳೆಯಿಂದ ರೈತರಿಗಾಗಿರುವ ನಷ್ಟಗಳ ಬಗ್ಗೆ ಚರ್ಚಿಸಿ ಅಡಿಕೆ ತೋಟಗಳಲ್ಲಿ ಕೊಳೆರೋಗದ ಬಾಧೆಯಿಂದ ಅರ್ಧಾಂಶಕ್ಕೂ ಹೆಚ್ಚು ಬೆಳೆ ನಷ್ಟವಾಗಿದ್ದರೆ, ಈಗ ಹಣ್ಣಾಗಿರುವ ಅಡಿಕೆಗಳನ್ನು ಓಣಗಿಸಲಾಗದೇ ಹಾಳಾಗುತ್ತಿದೆ. ಗಾಳಿ ಮಳೆಯ ಹೊಡೆತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ತೋಟಗಳಲ್ಲಿ ಮರಗಳು ಹಾನಿಗೊಂಡಿವೆ. ಇನ್ನೊಂದಡೆ ಕಾಳು ಮೆಣಸಿಗೂ ವಿಪರೀತ ಸೊರಗು ರೋಗ ಬಂದು ಬಳ್ಳಿಗಳು ಸಾಯುತ್ತಿವೆ.

ಇದೀಗ ಭತ್ತದ ಪಸಲು ಸ್ವಲ್ಪಮಟ್ಟಿಗೆ ಉತ್ತಮವಾಗಿ ಈ ಬಾರಿ ಬಂದಿದ್ದರೂ ಕಟಾವಿಗೆ ಸಾಧ್ಯವಾಗದೇ ಗದ್ದೆಯಲ್ಲಿ ಅಡ್ಡಬಿದ್ದು ಮೊಳಕೆ ಬರಲು ಪ್ರಾರಂಭ ವಾಗಿದೆ. ನೆಲಗಡಲೆ, ಧಾನ್ಯ, ತರಕಾರಿ ಮೊದಲಾದ ಬೆಳೆಯನ್ನು ಬೆಳೆಯಲು ರೈತರು ಹಿಂದೇಟು ಹಾಕುತಿದ್ದಾರೆ. ರೈತರಲ್ಲಿ ಧೈರ್ಯ ತುಂಬಿ ಕೃಷಿಯಲ್ಲಿ ಉಳಿಯುವಂತಾಗಲು ಅವನ ನಷ್ಟಕ್ಕೆ ವೈಜ್ಞಾನಿಕ ಲೆಕ್ಕಾಚಾರದ ದರದಲ್ಲಿ ಪರಿಹಾರ ನೀಡಬೇಕು. ಕೇವಲ ಸಾಂಕೇತಿಕ ಪರಿಹಾರ ನೀಡದೆ ನಿಜವಾದ ನಷ್ಟದ ಆದಾರದಲ್ಲಿ ಪರಿಹಾರವನ್ನು ಸರಕಾರ ಘೋಷಿಸೇಕು ಎಂದು ಸಂಘ ಅಭಿಪ್ರಾಯಪಟ್ಟಿದೆ.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಶ್ರೀನಿವಾಸ ಭಟ್, ಕೋಶಾಧಿಕಾರಿ ವಾಸುದೇವ ಶ್ಯಾನುಬಾಗ್, ರಾಜ್ಯಸಮಿತಿ ಸದಸ್ಯ ಬಿ.ವಿ ಪೂಜಾರಿ, ತಾಲೂಕಿನ ಪ್ರಮುಖರಾದ ಸದಾನಂದ ಶೆಟ್ಟಿ, ಪಾಂಡುರಂಗ ಹೆಗ್ಡೆ, ಆಸ್ತೀಕ ಶಾಸ್ತ್ರೀ, ಸೀತಾರಾಮ ಗಾಣಿಗ, ವೆಂಕಟೇಶ್ ರಾವ್, ಮಹಾಬಲ ಬಾಯರಿ, ರಾಜೀವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News