‘ಕ್ಯಾರ್’ ಚಂಡಮಾರುತದಿಂದ ಮೀನುಗಾರಿಕೆಗೆ ಹೊಡೆತ

Update: 2019-10-26 14:59 GMT

ಮಂಗಳೂರು, ಅ.26: ಅರಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದಿಂದ ಕಾಣಿಸಿಕೊಂಡ ‘ಕ್ಯಾರ್’ ಚಂಡಮಾರುತದ ಹೊಡೆತವು ಬಂದರು ದಕ್ಕೆಯಲ್ಲಿ ಮೀನುಗಾರಿಕೆಗೆ ಹೊಡೆತ ನೀಡಿದೆ. ಹವಾಮಾನ ಇಲಾಖೆಯು ಸಮುದ್ರಕ್ಕಿಳಿಯದಂತೆ ಮೀನುಗಾರರನ್ನು ಎಚ್ಚರಿಸಿದ ಕಾರಣ ದಕ್ಕೆಯಲ್ಲಿ ಭಾಗಶ: ಮೀನುಗಾರಿಕಾ ಚಟುವಟಿಕೆ ಸ್ಥಗಿತಗೊಂಡಿದೆ.

ರಜೆ ಮುಗಿದ ಬಳಿಕ ಮೀನುಗಾರಿಕೆಯ ಚಟುವಟಿಕೆ ಆರಂಭಗೊಂಡೊಡನೆ ಭಾರೀ ಮಳೆ, ಬಿರುಗಾಳಿ, ಮೀನಿನ ಕೊರತೆಯಿಂದಾಗಿ ಕರಾವಳಿಯ ಮೀನುಗಾರಿಕೆಯ ಮೇಲೆ ಭಾಗಶ: ಹೊಡೆತ ಬಿದ್ದಿತ್ತು. ಪರ್ಸಿನ್, ಯಾಂತ್ರೀಕೃತ ಬೋಟುಗಳ ಮಾಲಕರು ಭಾರೀ ನಷ್ಟವನ್ನು ಅನುಭವಿಸುತ್ತಿ ದ್ದಾರೆ. ಈ ಮಧ್ಯೆ ಕಳೆದ ಮೂರ್ನಾಲ್ಕು ದಿನದಿಂದ ‘ಕ್ಯಾರ್’ ಚಂಡಮಾರುತದ ಪರಿಣಾಮ ‘ರೆಡ್ ಅಲರ್ಟ್’ ಘೋಷಿಸಿರುವುದು ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಭೀರಿದೆ.

ಈಗಾಗಲೆ ಮೀನುಗಾರರು ತೂಾನ್, ಸಮುದ್ರದಲ್ಲಿ ಪ್ರಕ್ಷುಬ್ದ ಸ್ಥಿತಿ, ಹವಾಮಾನ ವೈಪರೀತ್ಯ ಇತ್ಯಾದಿಯಿಂದ ಕಂಗೆಟ್ಟಿದ್ದರು. ಆಗಸ್ಟ್ ಆರಂಭದಲ್ಲೇ ಕೋಟ್ಯಂತರ ರೂಪಾಯಿಯ ನಷ್ಟಕ್ಕೊಳಗಾಗಿದ್ದರು. ಇದರಿಂದ ಮೀನುಗಾರಿಕೆಯ ಮೇಲೆ ಹೂಡಿದ ಹಣ ವಾಪಸ್ ಪಡೆಯಲು ಮೀನುಗಾರರು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ‘ಕ್ಯಾರ್’ ಚಂಡಮಾರುತದ ಹೊಡೆದ ಒಂದೆಡೆಯಾದರೆ ಆರ್ಥಿಕ ಹೊಡೆತವು ಮೀನುಗಾರರನ್ನು ಕಂಗೆಡಿಸಿವೆ.

ಜಿಲ್ಲೆಯಲ್ಲಿ 1134 ಪರ್ಸೀನ್ ಮತ್ತು ಟ್ರಾಲ್ ಬೋಟ್, 1396 ಗಿಲ್‌ನೆಟ್ ಬೋಟ್, 531 ಸಾಂಪ್ರದಾಯಿಕ ಬೋಟ್‌ಗಳಿವೆ. ಆದಾಗ್ಯೂ ಈ ಬಾರಿಯ ದೀಪಾವಳಿಯು ಮೀನುಗಾರರ ಪಾಲಿಗೆ ಸಂಭ್ರಮ ತಂದುಕೊಟ್ಟಿಲ್ಲ. ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭಗೊಂಡಿದ್ದರೂ ಹವಾಮಾನ ವೈಪರಿತ್ಯದಿಂದ ಮೀನುಗಾರಿಕೆ ಆಶಾದಾಯಕವಾಗಿರಲಿಲ್ಲ. ಹಾಗಾಗಿ ರಜೆಯಲ್ಲಿ ತೆರಳಿದ್ದ ಹೊರ ರಾಜ್ಯದ ಮೀನುಗಾರರು ಸಕಾಲಕ್ಕೆ ಕೆಲಸಕ್ಕೆ ಬಂದಿರಲಿಲ್ಲ. ಆ ಬಳಿಕ ಬಂದರೂ ಕೂಡ ಇದೀಗ ಮತ್ತೆ ಮೀನುಗಾರಿಕೆಯಲ್ಲಿ ಏರುಪೇರು ಆದ ಕಾರಣ ಹೊರರಾಜ್ಯದ ಬಹುತೇಕ ಮೀನುಗಾರರು ಮರಳಿ ತವರು ಸೇರಿದ್ದಾರೆ.

ಕಾರ್ಗಿಲ್ ಮೀನಿನ ಹಾವಳಿ: ಹವಾಮಾನ ವೈಪರಿತ್ಯದಿಂದ ಕಂಗೆಟ್ಟ ಮೀನುಗಾರರಿಗೆ ಇದೀಗ ಮತ್ತೊಂದು ಹೊಡೆತ ಎಂಬಂತೆ ನಿರುಪಯುಕ್ತ ಕಾರ್ಗಿಲ್ ಮೀನುಗಳು ಟನ್‌ಗಟ್ಟಲೇ ಸಿಗುತ್ತಿದೆ. ಈ ಮೀನಿಗೆ ಹೆಚ್ಚು ಬೇಡಿಕೆ ಇಲ್ಲ. ತಿನ್ನಲು ಯೋಗ್ಯವಲ್ಲದ ಕಾರ್ಗಿಲ್ ಮೀನುಗಳನ್ನು ಫಿಶ್‌ಮಿಲ್‌ಗಳಿಗೆ ಕೆ.ಜಿ.ಗೆ 10 ಅಥವಾ 12 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಸುಮಾರು 15ರಿಂದ 20 ನಾಟಿಕಲ್ ದೂರದಲ್ಲಿ ಈ ಮೀನುಗಳು ಸಿಗುತ್ತಿವೆ. ಆಳಸಮುದ್ರ ಮೀನುಗಾರಿಕೆ ಹೋಗಿ ಬರಲು 5 ಲಕ್ಷ ರೂ. ಡಿಸೇಲ್ ಬೇಕಾಗುತ್ತಿದ್ದು, ಕಾರ್ಗಿಲ್ ಮೀನು ಸಿಗುತ್ತಿರುವುದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ.

ಮೀನು ದರ ಏರಿಕೆ: ಮೀನುಗಾರಿಕೆಯ ಋತು ಆರಂಭದಲ್ಲೇ ಸಮಸ್ಯೆಗಳ ಸರಮಾಲೆ ಎದುರಾದ ಕಾರಣ ಮೀನುಗಾರಿಕೆಗೆ ಅಪಾರ ಹೊಡೆತ ನೀಡಿದೆ. ಇದರ ಪರಿಣಾಮವು ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿಹಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News