ಉಡುಪಿ: ಚಂಡಮಾರುತ ಭೀತಿ ದೂರ, ಮುಂದುವರಿದ ಮಳೆ

Update: 2019-10-26 16:15 GMT
ನೆರೆ-ಮಳೆ- ಮಳೆಯಿಂದ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಇಂದೂ ನೀರು ನಿಂತಿದ್ದು, ದೀಪಾವಳಿ ವ್ಯಾಪಾರಕ್ಕಾಗಿ ವಿವಿಧೆಡೆಗಳಿಂದ ಬಂದಿದ್ದ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

 ಉಡುಪಿ, ಅ.26: ‘ಕ್ಯಾರ್’ ಚಂಡಮಾರುತದ ಭೀತಿಯಿಂದ ಉಡುಪಿ ಜಿಲ್ಲೆ ಪಾರಾದರೂ, ಇದರ ಪರಿಣಾಮವಾಗಿ ಸುರಿಯುತ್ತಿರುವ ಮಳೆ ಇಂದು ಸಹ ಮುಂದುವರಿದಿದೆ. ಆದರೆ ಮಳೆಯ ಪ್ರಮಾಣ ತಗ್ಗಿದ್ದು, ಮಧ್ಯ ವಿರಾಮ ನೀಡಿ ಆಗಾಗ ಸುರಿಯುತ್ತಿದೆ.

ನಿನ್ನೆಯವರೆಗೆ ಬೀಸುತಿದ್ದ ಗಾಳಿ ಇಂದು ಶಾಂತವಾಗಿದ್ದು, ಧಾರಾಕಾರ ಮಳೆ ಆಗಾಗ ಸುರಿಯುತ್ತಿದೆ. ಇದು ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ಕೋಟ ಹೋಬಳಿಯ ಬನ್ನಾಡಿ, ಚಿತ್ರಪಾಡಿ ಆಸುಪಾಸಿನ ಅನೇಕ ಕಡೆಗಳಲ್ಲಿ 40 ಎಕರೆಗೂ ಅಧಿಕ ಗದ್ದೆಯಲ್ಲಿ ನೀರು ನಿಂತಿದ್ದು, ಫಸಲು ನಷ್ಟವಾಗುವ ಭೀತಿಯನ್ನು ರೈತರು ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 74.90 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 78.7,ಕುಂದಾಪುರದಲ್ಲಿ 79.8, ಕಾರ್ಕಳದಲ್ಲಿ 64.4ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಉಡುಪಿ ತಾಲೂಕಿನ ಐದು ಮನೆಗಳಿಗೆ ನಿನ್ನೆಯ ಗಾಳಿ-ಮಳೆಯಿಂದ ಹಾನಿಯಾಗಿದ್ದು, ಸುಮಾರು ಎರಡು ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಕಡೆಕಾರು ಗ್ರಾಮದ ಶಶಿಧರ ಸಾಲ್ಯಾನ್ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು 1.30ಲಕ್ಷ ರೂ.ನಷ್ಟ ಸಂಭವಿಸಿದೆ. ಬೈಂದೂರು ತಾಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿದ್ದು 4ಲಕ್ಷ ರೂ.ನಷ್ಟವಾಗಿದೆ. ಉಪ್ಪುಂದ ಗ್ರಾಮದ ಸೀತು ಮನೆ ಗಾಳಿ-ಮಳೆಗೆ ಸಂಪೂರ್ಣ ಕುಸಿದಿದ್ದು ಮೂರು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಕುಂದಾಪುರ ತಾಲೂಕಿನಲ್ಲಿ 9 ಮನೆಗಳಿಗೆ ಒಟ್ಟು 2.5 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ್ದರೆ, ಬ್ರಹ್ಮಾವರ ತಾಲೂಕಿನಲ್ಲಿ ಮೂರು ಮನೆಗೆ ಒಂದು ಲಕ್ಷ ರೂ., ಕಾಪು ತಾಲೂಕಿನಲ್ಲಿ ಆರು ಮನೆಗಳಿಗೆ 1.25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News