ಬೆಳ್ತಂಗಡಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಮಾಧುಸ್ವಾಮಿ ಭೇಟಿ
ಬೆಳ್ತಂಗಡಿ: ಪಶ್ವಿಮ ಘಟ್ಟದ ಭೂಕುಸಿತದಿಂದ ಉಂಟಾದ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶವನ್ನು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶನಿವಾರ ವೀಕ್ಷಿಸಿ, ಸ್ಥಳೀಯ ನಿವಾಸಿಗಳಿಂದ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಇಲಾಖೆಯಿಂದ ಕೈಗೊಳ್ಳಲಾಗುವ ಕಾಮಗಾರಿಗಳ ಕುರಿತು ಸೂಚನೆಗಳನ್ನು ನೀಡಿದರು.
ಪ್ರವಾಹ ಪೀಡಿತ ಮಿತ್ತಬಾಗಿಲಿನ ಕುಕ್ಕಾವು ಪ್ರದೇಶಕ್ಕೆ ತೆರಳಿದ ಸಚಿವರು ಇಲ್ಲಿನ ಪ್ರದೇಶವನ್ನು ವೀಕ್ಷಿಸಿದರು. ಬಳಿಕ ಚಾರ್ಮಾಡಿ ಗ್ರಾಮದ ಅಂತರ ಹಾಗೂ ಅರಣೆಪಾದೆ ಪ್ರದೇಶ ತೆರಳಿದರು. ನೆರೆಯಿಂದ ಹಾನಿಗೊಳಗಾದ ಸೇತುವೆ, ನದಿಗಳಲ್ಲಿ ತುಂಬಿಕೊಂಡಿದ್ದ ಹೂಳು, ಮರಗಳ ರಾಶಿ, ಹಾನಿಗೊಳಗಾದ ಮನೆಗಳು, ಕೃಷಿಯ ಕುರಿತು, ನದಿ ಪಾತ್ರ ಬದಲಾಯಿಸಿದ್ದರಿಂದ, ನದಿಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ತೋಟಗಳಿಗೆ, ಮನೆಗಳಿಗೆ ಆಗಾಗ್ಗೆ ನೀರು ನುಗ್ಗುತಿದೆ. ಇಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿದರೆ ಮತ್ತೆ ಕೃಷಿಯನ್ನು ಮಾಡಿಕೊಳ್ಳಲು ಸಾಧ್ಯ. ಸ್ಥಳೀಯರು ಸಚಿವರಿಗೆ ತಿಳಿಸಿದರು. ನದಿಗಳಲ್ಲಿರುವ ಹೂಳನ್ನು ತೆಗದು ಪ್ರವಾಹದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪ್ರದೇಶದ ನಿವಾಸಿಗಳು ಸಚಿವರಲ್ಲಿ ಮನವಿ ಮಾಡಿಕೊಂಡರು.
ಸಚಿವರ ಜೊತೆ ಶಾಸಕ ಹರೀಶ ಪೂಂಜಾ, ಸಣ್ಣ ನೀರಾವರಿ ಇಲಾಖೆಯ ಸರಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸೂಪರ್‍ಡೆಂಟ್ ಎಂಜಿನಿಯರ್ ರಾಜಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ ಕುಮಾರ್, ಸಹಾಯಕ ಎಂಜಿನಿಯರ್‍ರಾದ ಪ್ರಸನ್ನ ಹಾಗೂ ಶಿವಪ್ರಸನ್ನ, ಕಿರಿಯ ಎಂಜಿನಿಯರ್ ರಾಕೇಶ್, ತಹಸೀಲ್ದಾರ ಗಣಪತಿ ಶಾಸ್ರ್ತಿ, ಇ.ಒ ಕೆ.ಇ ಜಯರಾಂ, ಜಿ.ಪಂ ಸದಸ್ಯೆ ಸೌಮ್ಯಲತಾ, ತಾ.ಪಂ ಸದಸ್ಯ ಕೊರಗಪ್ಪ ಗೌಡ ಅರಣಪಾದೆ, ಗ್ರಾ.ಪಂ ಚಾರ್ಮಾಡಿ ಅಧ್ಯಕ್ಷೆ ಶೈಲಜಾ, ಸದಸ್ಯರಾದ ಉಮೇಶ್ ಗೌಡ, ಗೋಪಾಲಕೃಷ್ಣ, ರವಿ, ವಿನೋದ, ಕೇಶವತಿ, ಓಬಯ್ಯ, ಸರೋಜಿನಿ, ಮಾಜಿ ಅಧ್ಯಕ್ಷೆ ಶಾರದ, ಹಾಗೂ ಇತರರು ಇದ್ದರು.
ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕಾಗಿ 30 ಕೋ.ರೂ.ಗಳನ್ನು ಬಿಡುಗಡೆ ಮಾಧುಸ್ವಾಮಿ
ಬೆಳ್ತಂಗಡಿ ತಾಲೂಕಿನಲ್ಲಿ ಆ.9 ರಂದು ಸಂಭವಿಸಿದ ಪ್ರವಾಹದಿಂದ ಹಾನಿಯಾಗಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕಾಗಿ 30 ಕೋ.ರೂ.ಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಯನ್ನು ಮಳೆ ನಿಂತ ತತ್‍ಕ್ಷಣ ಆರಂಭಿಸುವ ಕುರಿತು ಎಂಜಿನಿಯರ್‍ಗಳ ಜತೆ ಚರ್ಚಿಸಲಾಗಿದೆ. ಇಲಾಖೆ ವ್ಯಾಪ್ತಿಯ ಇನ್ನಿತರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸಂಪುಟದ ಸಭೆಯಲ್ಲಿ ಚರ್ಚೆ ಮಾಡುವಂತೆ ರಾಜ್ಯ ಮುಖ್ಯಮಂತ್ರಿಗಳು ಎಲ್ಲಾ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ. ಏನು ಅನಾಹುತಗಳು ಸಂಭವಿಸಿದೆ, ಜನರಿಗೆ ಏನು ನೆರವು ಬೇಕು ಎಂಬುದರ ಕುರಿತು ಸಭೆಯಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದು ಸಚಿವರು ತಿಳಿಸಿದರು.
ನದಿ ಪಾತ್ರಗಳ ಪ್ರದೇಶದಲ್ಲಿ ಕೆಲವೊಂದೆಡೆ ಕೃಷಿ ತೋಟಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣಕ್ಕೆ ಮನವಿ ಬಂದಿದ್ದು, ಹೀಗಾಗಿ ಅದರ ಕುರಿತು ಅಧ್ಯಯನ ನಡೆಸಲು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ ಶ್ರೀನಿವಾಸ್ ಅವರನ್ನು ಕಳುಹಿಸಿ ಅವರು ನೀಡಿದ ವರದಿಯ ಆಧಾರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತೇವೆ. ಅರಣೆಪಾದೆ ಪ್ರದೇಶದಲ್ಲಿ ಸುತ್ತಮುತ್ತ ಸುಮಾರು 100 ಎಕರೆ ಗಿಂತಲೂ ಅಧಿಕ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಅದರ ದುರಸ್ಥಿಗಾಗಿ ಕ್ರಿಯಾಯೋಜನೆ ತಯಾರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇವೆ ಎಂದರು.
ನದಿಗಳ ಹೂಳು ತೆಗೆಯುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನದಿಯಿಂದ ತೆಗೆದ ಹೂಳುಗಳನ್ನು ತೆಗೆದು ಏನು ಮಾಡಬಹುದು ಎಂಬ ಸಮಸ್ಯೆಯೂ ಎದುರಾಗುತ್ತದೆ. ಹೂಳು ತೆಗೆಯುವ ಕುರಿತು ಎನ್‍ಡಿಆರ್‍ಎಫ್‍ನಲ್ಲಿ ಈಗಾಗಲೇ ಡಿಸಿಗಳಿಗೆ ಅನುದಾನ ನೀಡಲಾಗಿದೆ ಎಂದರು. ಜತೆಗೆ ಪರಂಬೋಕು ಸ್ಥಳದಲ್ಲಿ ಕೃಷಿ ಹಾನಿಯಾಗಿದ್ದರೆ ಅದರ ಪರಿಹಾರಕ್ಕೆ ಏನೂ ಮಾಡುವಂತಿಲ್ಲ ಎಂದು ತಿಳಿಸಿದರು.
ಹೂತು ಹೋದ ಕಾರು
ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚಾರ್ಮಾಡಿ ಗ್ರಾಮದ ಅಂತರ ಹಾಗೂ ಅರಣಪಾದೆ ಪ್ರದೇಶಕ್ಕೆ ಭೇಟಿ ನೀಡಿ ಹಿಂತಿರುಗುವ ಸಮಯದಲ್ಲಿ ಸಚಿವರ ಜತೆ ಆಗಮಿಸಿದ್ದ ಸರಕಾರಿ ಅಧಿಕಾರಿಯ ಕಾರನ್ನು ಚಾಲಕ ತಿರುಗಿಸುವ ವೇಳೆ ಇಲ್ಲಿನ ತೋಟಗಳಲ್ಲಿ ಹೂಳು ತುಂಬಿದ್ದರಿಂದ ಹೂತು ಹೋದ ಘಟನೆ ನಡೆಯಿತು. ಮಳೆಯೂ ಇದ್ದ ಕಾರಣ ತೋಟಗಳಲ್ಲಿ ಹೂಳು ತುಂಬಿದ್ದರಿಂದ ಕಾರನ್ನು ತೆಗೆಯಲು ಕಷ್ಟವಾಯಿತು. ಬಳಿಕ ಸ್ಥಳೀಯರು ಕೆಸರಿಗೆ ಕಲ್ಲುಗಳನ್ನು ಹಾಕಿದರು ಬಳಿಕ ಕಾರನ್ನು ದೂಡಿ ಮೇಲೆ ತರಲಾಯಿತು.