ಸ್ವಚ್ಛತೆ ಕಾಪಾಡದ ತಾಜ್ ವೆಸ್ಟೆಂಡ್‌ಗೆ 50 ಸಾವಿರ ರೂ. ದಂಡ

Update: 2019-10-26 17:35 GMT

ಬೆಂಗಳೂರು, ಅ.26: ಕಸ ವಿಂಗಡಣೆ ಮಾಡದಿರುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮತ್ತು ಸ್ವಚ್ಛತೆ ಕಾಪಾಡದ ನಗರದ ಪ್ರತಿಷ್ಠಿತ ತಾಜ್ ವೆಸ್ಟೆಂಡ್ ಖಾಸಗಿ ಹೊಟೇಲ್‌ಗೆ ಬಿಬಿಎಂಪಿ 50 ಸಾವಿರ ರೂ.ದಂಡ ವಿಧಿಸಿದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಾಜ್ ವೆಸ್ಟೆಂಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹೊಟೇಲ್ ಸಿಬ್ಬಂದಿ ಕಸ ವಿಂಗಡಣೆ ಮಾಡದಿರುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಜತೆಗೆ ಹೊಟೇಲ್‌ನಲ್ಲಿ ಆಹಾರ ತಯಾರಿಸಲು ಕಲುಷಿತ ತರಕಾರಿ ಬಳಕೆ ಮಾಡುತ್ತಿರುವುದು ಹಾಗೂ ಗ್ರಾಹಕರಿಗೆ ಪ್ರತ್ಯೇಕ ಸ್ಮೋಕಿಂಗ್ ಝೋನ್ ವ್ಯವಸ್ಥೆ ಮಾಡದಿರುವುದು ಕಂಡು ಬಂದಿದೆ. ಹೊಟೇಲ್ ಆಡಳಿತ ಮಂಡಳಿಗೆ ಕೂಡಲೇ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿರುವ ಎಲ್ಲಾ ಹೊಟೇಲ್ ಮಾಲಕರು ಪಾಲಿಕೆ ಜಾರಿಗೆ ತಂದಿರುವ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ವಾಣಿಜ್ಯ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News