ಬಾಳೆ ನಾರಿನಿಂದ ಮ್ಯಾಟ್ ತಯಾರಿಸುವ ಬಗೆ ನಿಮಗೆ ಗೊತ್ತೇ ?

Update: 2019-10-26 18:12 GMT

ಬೆಂಗಳೂರು, ಅ.26: ರೈತರು ಬೆಳೆದ ಬಾಳೆ ತೋಟದಲ್ಲಿ ಬೆಳೆಯ ನಂತರ ಬಾಳೆ ದಿಂಡುಗಳನ್ನು ಕಡಿದು ಹಾಕುತ್ತಾರೆ. ಆದರೆ, ಅದನ್ನು ವ್ಯರ್ಥ ಮಾಡುವುದರ ಬದಲಿಗೆ ಬಾಳೆ ನಾರಿನಿಂದ ಮ್ಯಾಟ್ ತಯಾರಿಸುವಂತಹ ಪ್ರಕ್ರಿಯೆಯನ್ನು ಕೀ ಕಾಸ್ಟ್ ಕಂಪೆನಿ ಪರಿಚಯಿಸಿದೆ. ಇದು ರೈತರಿಗೆ ಎರಡನೆ ಹಂತದ ಆದಾಯದ ಮೂಲವಾಗಿದ್ದು, ಇದರಿಂದಲೂ ರೈತರು ತಮ್ಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ನಿರುಪಯುಕ್ತವೆಂದು ಅಂದುಕೊಳ್ಳುವ ಬಾಳೆ ನಾರಿನಿಂದ ತಯಾರಿಸುವ ಈ ಮ್ಯಾಟ್ ಸುಮಾರು ಮೂರು ವರ್ಷ ಬಾಳಿಕೆ ಬರಲಿದ್ದು, ಉತ್ತಮ ಗುಣಮಟ್ಟದಾಗಿರುತ್ತದೆ. ಡೈನಿಂಗ್ ಟೇಬಲ್ ಮೇಲೆ ಹಾಕುವ ಬಟ್ಟೆಯನ್ನು ಇದರಿಂದ ತಯಾರಿಸಬಹುದಾಗಿದೆ.

ನಗರದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಇಂತಹ ವಿನೂತನ ಪ್ರಯೋಗವನ್ನು ಪ್ರದರ್ಶಿಸಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮಳಿಗೆ ಬಳಿ ತೆರಳಿ ಮಾಹಿತಿ ಪಡೆದುಕೊಂಡರು. ರೈತರಷ್ಟೇ ಅಲ್ಲದೆ, ವ್ಯಾಪಾರಸ್ಥರಿಗೂ ಇದು ಅನುಕೂಲಕರವಾಗಲಿದೆ.

ಮನೆಯಲ್ಲಿಯೇ ಪೇಪರ್ ತಯಾರಿಸಿ!: ಮನೆಯಲ್ಲಿ ಕೆಲಸಕ್ಕೆ ಬಾರದ ಕಾಟನ್ ಬಟ್ಟೆ ಇದ್ದರೆ ಕಸದೊಂದಿಗೆ ಬೆರೆಸಿ ಹೊರಹಾಕುವ ಬದಲು, ಪೇಪರ್ ತಯಾರು ಮಾಡುವಂತಹ ವಿಧಾನವನ್ನು ಪ್ರದರ್ಶಿಸಲಾಗಿದೆ.

ನಿರುಪಯುಕ್ತ ಕಾಟನ್ ಬಟ್ಟೆ ಇದ್ದರೆ, ಮನೆಯಲ್ಲಿಯೇ ಪೇಪರನ್ನು ತಯಾರಿಸಬಹುದು. ಮೊದಲ ಬಟ್ಟೆಯನ್ನು ಚೂರು-ಚೂರಾಗಿ ಕಟ್ ಮಾಡಿ ನೀರಿನಲ್ಲಿ 24 ಗಂಟೆ ಬಿಡಬೇಕು. ನಂತರ ಬಟ್ಟೆಯನ್ನು ಹಿಂಡಿ, ಮಿಕ್ಸರ್‌ನಲ್ಲಿ ಹಾಕಿ ಮೆದು ಮಾಡಿ, ಮೆಷ್‌ನಲ್ಲಿ ಕಂಪ್ರೆಸ್ ಮಾಡಿ ಬಿಸಿಲಿನಲ್ಲಿ ಒಣಗಿಸಿದರೆ, ಪೇಪರ್ ತಯಾರು ಆಗುತ್ತದೆ. ಚಿಕ್ಕ ಮಕ್ಕಳು ಚಿತ್ರ ಬಿಡಿಸಲು ಉಪಯೋಗಿಸಬಹುದು.

ಪೆನ್ಸಿಲ್ ತಯಾರಿಕೆ: ಯಾರಿಗೂ ಬೇಡವಾದ ಚಿಂದಿ ಬಟ್ಟೆಗಳು ಇವರ ಕೈಯಲ್ಲಿ ಅಕ್ಷರ ಗೀಚುವ ಹಾಳೆಗಳು ಮತ್ತು ಪೆನ್ಸಿಲ್‌ಗಳಾಗಿ ಪರಿವರ್ತನೆ ಆಗುತ್ತವೆ. ಅವುಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

ಚಿಂದಿ ಬಟ್ಟೆಗಳನ್ನು ಆಯ್ದು ಅವುಗಳನ್ನು ಮೌಲ್ಯವರ್ಧನೆ ಮಾಡಿ, ಪೇಪರ್ ಮತ್ತು ಪೆನ್ಸಿಲ್‌ಗಳಾಗಿ ಈ ಕಂಪೆನಿ ತಯಾರಿಸುತ್ತಿದೆ. ಹೀಗೆ ತಯಾರಾಗುವ ಉತ್ಪನ್ನಗಳು ಸಾಮಾನ್ಯವಾಗಿ ಮರಗಳಿಂದ ತಯಾರಿಸಿದ ಕಾಗದಗಳಿಗಿಂತ ಉತ್ತಮ ಗುಣಮಟ್ಟದ್ದಾಗಿರುತ್ತವೆ. ಹೀಗಾಗಿ, ಇವುಗಳಿಗೆ ಭಾರಿ ಬೇಡಿಕೆ ಇದ್ದು, ದೇಶ-ವಿದೇಶಗಳಿಗೆ ಇವು ರಫ್ತಾಗುತ್ತಿವೆ. ಆ ಮೂಲಕ ಲಕ್ಷಾಂತರ ಆದಾಯ ತಂದುಕೊಡುತ್ತಿವೆ.

ವಿದೇಶದಲ್ಲಿ ಬಾರೀ ಬೇಡಿಕೆ!: ಕಾಟನ್ ಬಟ್ಟೆಯಿಂದ ತಯಾರಿಸಿದ ಪೇಪರ್, ಪೆನ್ಸಿಲ್‌ಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಹತ್ತು ಮಂದಿ ಒಂದು ತಿಂಗಳಿಗೆ 300 ಡೈರಿ, ಒಂದು ಲಕ್ಷ ಪೆನ್ಸಿಲ್‌ನ್ನು ತಯಾರಿಸಬಹುದು. ಆದರೆ, ವಿದೇಶದವರು ಈ ಉತ್ಪನ್ನಕ್ಕೆ ಭಾರೀ ಬೇಡಿಕೆ ಇಟ್ಟಿದ್ದು, ಪೂರೈಕೆಗೆ ಉತ್ಪಾದಕರ ಕೊರತೆ ಇದೆ. ಕೈ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ ಎಂದು ಕೀ ಕಾಸ್ಟ್ ಕಂಪನಿ ಮಾಲಕ ವಿನ್ಸ್ ಅಭಿಪ್ರಾಯವಾಗಿದೆ.

ಕಾಟನ್ ಬಟ್ಟೆಗಳಿಂದ ಪೇಪರ್, ಪೆನ್ಸಿಲ್ ತಯಾರಿಸುವ ಕೆಲಸ ಮಾಡಲಾಗುತ್ತಿದೆ. ತಿಂಗಳಿಗೆ ಒಂದೂವರೆ ಲಕ್ಷದಷ್ಟು ಪೆನ್ಸಿಲ್, ಡೈರಿ, 500 ಮ್ಯಾಟ್‌ಗಳನ್ನು ತಯಾರಿಸಲಾಗುತ್ತಿದೆ. ಇದು ಎಲ್ಲವೂ ಪರಿಸರ ಸ್ನೇಹಿಯಾಗಿದ್ದು, ಹೆಚ್ಚು ಉಪಯುಕ್ತವಾಗಿವೆ.

- ವಿನ್ಸ್, ಕೀ ಕಾಸ್ಟ್ ಮಾಲಕ

Writer - - ಬಾಬುರೆಡ್ಡಿ ಚಿಂತಾಮಣಿ

contributor

Editor - - ಬಾಬುರೆಡ್ಡಿ ಚಿಂತಾಮಣಿ

contributor

Similar News