ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷೆಯಾಗಿ ಡಾ. ಧರಣಿದೇವಿ ಮಾಲಗತ್ತಿ ಆಯ್ಕೆ

Update: 2019-10-28 14:07 GMT

ವಿಟ್ಲ : ಅ. 26:  ಕನ್ನಡ ಸಾಹಿತ್ಯಾಭಿಮಾನಿ ನಾಗರಿಕರು ಮಾಣಿ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಡಿ. 28 ಮತ್ತು 29ರಂದು  ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಹಮ್ಮಿಕೊಂಡಿರುವ 20ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಐ.ಪಿ.ಎಸ್. ಅಧಿಕಾರಿ, ಮೈಸೂರಿನಲ್ಲಿರುವ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಡಾ. ಧರಣಿದೇವಿ ಮಾಲಗತ್ತಿ  ಆಯ್ಕೆಯಾಗಿದ್ದಾರೆ.

ಮೂಲತಃ ಬಂಟ್ವಾಳ ತಾಲೂಕು  ಮಂಚಿ ಗ್ರಾಮ  ಕುಕ್ಕಾಜೆ ನಿವಾಸಿ ಪಿ.ದೂಮಣ್ಣ ರೈ, ದೇವಕಿ ರೈ ದಂಪತಿಯ ಪುತ್ರಿಯಾಗಿರುವ ಇವರು ಪ್ರೊಫೆಸರ್ ಅರವಿಂದ ಮಾಲಗತ್ತಿ ಅವರ ಪತ್ನಿ.

ಐವತ್ತೆರಡು ಹರೆಯದ ಅವರು ಬಿಬಿಎಂ,  ಎಂ.ಕಾಂ., ಕನ್ನಡ ಎಂ.ಎ., ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪಡೆದಿದ್ದಾರೆ. ಮಂಗಳೂರು ವಿವಿ, ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜು, ಸೈಂಟ್ ಆಗ್ನೇಸ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು,  ಮುಕ್ತ ವಿವಿ ಸೇರಿ 13 ವರ್ಷಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಮಾಡಿದ್ದಾರೆ.

1999ರ ಕೆ.ಪಿ.ಎಸ್‍.ಸಿ ಪರೀಕ್ಷೆ ಮೂಲಕ 2006 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಸೇವೆಗೆ ಸೇರ್ಪಡೆಗೊಂಡರು. 2008 ರಲ್ಲಿ ಕೊಳ್ಳೇಗಾಲದಲ್ಲಿ ಡಿಎಸ್‍ಪಿ, ಇಲಾಖಾ ವಿಚಾರಣೆಯ ಡಿವೈಎಸ್‍ಪಿ, 2012ರ ಆಗಸ್ಟ್ ನಲ್ಲಿ ಸೂಪರಿಂಟೆಂಡೆಂಟ್ ಅಫ್ ಪೊಲೀಸ್ ಆಗಿ ಭಡ್ತಿ ಹೊಂದಿ ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾದರು. 2015ರ ಆಯ್ಕೆ ಪಟ್ಟಿಯ ಐ.ಪಿ.ಎಸ್. ಅಧಿಕಾರಿಯಾಗಿ ಪ್ರಸ್ತುತ ಮೈಸೂರು ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. 

ಪ್ರಕಟಿತ ಕೃತಿಗಳು

ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹ, ವಿಚಾರ ಸಂಕಿರಣ, ಬ್ರೆಡ್ ಜಾಮ್, ತುಳುನಾಡ ಸಿರಿ, ವಯಸ್ಕರ ಶಿಕ್ಷಣ ಕೃತಿ, ಸ್ತ್ರೀವಾದ ಮತ್ತು ಭಾರತೀಯತೆ,  ಅ£ೀಲ ಆರಾಧನಾ, ಸಾಹಿತ್ಯ, ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ, ಈವುರಿವ ದಿವ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ, ದಟ್ಟ ಧರಣಿ, ಮಾನಿಷಾದ, ಇಳೆಯ ಕಣ್ಣು, ದಹರಾಕಾಶ, ಸಂಪಾದನೆ, ಮಹಿಳೆ ಮತ್ತು ಅಸಾಂಪ್ರದಾಯಿಕತೆ, ಇಳಾಭಾರತಂ-ಮಹಾಕಾವ್ಯ, ಆಯರೆ ಕೊನೆಯ ಮಾವು, ಪೊರ್ಲುದ ಪುರಲ್-ತುಳು ಕಾವ್ಯ, ಧರಣಿ ಚುಟುಕು ಕವಿತೆಗಳು, ಭಾಗವತ ಭಾವಗೀತ, ಡುಂಡುಭ ವಿಲಾಪ ಸಹಿತ ಇನ್ನಿತರ ಕೃತಿಗಳನ್ನು ಬರೆದಿದ್ದಾರೆ.

ಪ್ರಶಸ್ತಿಗಳು

ಡಾ. ಧರಣಿದೇವಿ ಮಾಲಗತ್ತಿ ಅವರಿಗೆ ಗೊರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಮಾಣಿಕ ಬಾಯಿ ಪಾಟೀಲ ಪ್ರಶಸ್ತಿ,  ನೀಲಗಂಗಾ ದತ್ತಿ ಬಹುಮಾನ, ಗೀತಾ ದೇಸಾಯಿ ದತ್ತಿ ಬಹುಮಾನ, ಎಚ್. ನರಸಿಂಹಯ್ಯ ಪ್ರಶಸ್ತಿ, , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತಿ ದಂಪತಿ ಪ್ರಶಸ್ತಿ , ದೇಜಗೌ ಪ್ರಶಸ್ತಿ, ಕದಳಿ ಮಹಿಳಾ ವೇದಿಕೆಯ - ಸಾಹಿತ್ಯ ಪ್ರಶಸ್ತಿ, ಸೀತಾಸುತ ಟ್ರಸ್ಟ್ ನ ಸಾಹಿತ್ಯ ಸೇವಾ ಪ್ರಶಸ್ತಿ, ಹಲಸಂಗಿ ಗೆಳೆಯರು ಪ್ರತಿಷ್ಟಾನದ ಕಾವ್ಯ ಪ್ರಶಸ್ತಿ, ಮೈಸೂರಿನ ಹೊಯ್ಸಳ ಸಂಘದ ಪ್ರಶಸ್ತಿಗಳು ಸಂದಿವೆ.

ಬಂಟ್ವಾಳ ತಾಲೂಕು 20ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮೂಲತಃ ಬಂಟ್ವಾಳ ತಾಲೂಕಿನವರಾದ  ಡಾ. ಧರಣಿ ದೇವಿ ಮಾಲಗತ್ತಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News