ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಳ್ತಂಗಡಿಯ ದೇವರಾವ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Update: 2019-10-28 17:05 GMT

ಬೆಳ್ತಂಗಡಿ: ಭತ್ತದ ಕೃಷಿಯಲ್ಲಿ ಕಳೆದ 52 ವರ್ಷಗಳಿಂದ ನೆಮ್ಮದಿಯ ಬದುಕನ್ನು ನಡೆಸುತ್ತಿರುವ 74ರ ಹರೆಯದ ಬೆಳ್ತಂಗಡಿ ತಾಲೂಕಿನ ಬಂಗಾಡಿ ಸಮೀಪದ ಮಿತ್ತಬಾಗಿಲಿನ ಅಮೈ ನಿವಾಸಿ ಕೃಷಿ ತಪಸ್ವಿ ಸುಮಾರು 160 ಕ್ಕು ಹೆಚ್ಚು ತಳಿಗಳ ಸಂರಕ್ಷಕ ಬಿ.ಕೆ. ದೇವರಾವ್ ಅವರು ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರಾವಳಿ ಭಾಗದಲ್ಲಿದ್ದ ಹೆಚ್ಚಿನೆಲ್ಲ ಭತ್ತದ ತಳಿಗಳನ್ನೂ ಅವರು ಇನ್ನೂ ತನ್ನ ಕೃಷಿ ಕ್ಷೇತ್ರದಲ್ಲಿ ಉಳಿಸಿಕೊಂಡಿದ್ದಾರೆ. ತಮ್ಮ ಐದು ಎಕರೆ ಗದ್ದೆಯಲ್ಲಿ  ಎರಡು ಬೆಳೆಯಲ್ಲಿ ಸುಮಾರು 160ಕ್ಕೂ ಹೆಚ್ಚು ತಳಿಗಳನ್ನು ಬಿತ್ತಿ ಬೆಳೆಯುತ್ತಾರೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿ ಸದೆ ಸಾವಯವ ರೀತಿಯಲ್ಲಿ ಪ್ರತೀ ಬೆಳೆಯಲ್ಲಿ  ಸರಾಸರಿ 50 ಕಿಂಟ್ವಾಲ್ ಭತ್ತದ ಇಳುವರಿಯನ್ನು ಪಡೆಯುತ್ತಿದ್ದಾರೆ ಅವರು. ಕಳೆದ 25 ವರ್ಷಗಳಿಂದ ಟಿಲ್ಲರ್ ಉಪಯೋಗಿಕೊಂಡು ತಮ್ಮ ಗದ್ದೆಯನ್ನು ಊಳುತ್ತಿದ್ದಾರೆ. ಅವರ ಮಗ ಬಿ.ಕೆ. ಪರಮೇಶ್ವರ ರಾವ್ ಅವರು ಟಿಲ್ಲರ್ ನಲ್ಲಿ ಗದ್ದೆಯನ್ನು ಊಳುತ್ತಾರೆ.  ಇಡೀ ಕುಟುಂಬವೇ ಅವರೊಂದಿಗೆ ಗದ್ದೆ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಉಳಿದ ಕೆಲಸಗಳನ್ನು ಸ್ವತಃ ದೇವರಾವ್ ಅವರೂ ಗದ್ದೆಗೆ ಇಳಿದು ಮಾಡುತ್ತಾರೆ. ಕೆಲವೊಂದು ಅಪರೂಪದ ತಳಿಗಳನ್ನು ತಳಿ ಸಂರಕ್ಷಣೆಯ ಉದ್ಧೇಶದಿಂದಲೇ  ಬೆಳೆಸುತ್ತಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುತ್ತಾರೆ. ಯಾವ ತಳಿ ಎಂಬುದು ನೋಡಿ ಗುರುತಿಸುವಷ್ಟು ಸೂಕ್ಷ್ಮತೆ ಅವರಲ್ಲಿದೆ. ಅಲ್ಲದೆ ಪ್ರತೀ ತಳಿಗಳಿಗೆ ಸಂಖ್ಯೆಗಳನ್ನು ನಮೂದಿಸಿ, ಅದರ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ದಶಕಗಳ ಹಿಂದೆ ನಿತ್ಯ ಅಡುಗೆಯ ಅನ್ನಕ್ಕೊಂದು, ಔತಣದ ಭೋಜನಕ್ಕೊಂದು, ದೋಸೆ ಮಾಡಲು ಮಗದೊಂದು, ಅವಲಕ್ಕಿ ಮಾಡಲು ಇನ್ನೊಂದು ಹೀಗೆ ಅನೇಕ ತಳಿಗಳಿದ್ದವು. ಈಗ ಅವು ನಶಿಸಿ ಹೋಗುತ್ತಿದೆ. ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.

ಇವರ ಸಾಧನೆಯನ್ನು ಹುರುತಿಸಿ "ತಳಿ ತಪಸ್ವಿ" ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ. ತಳಿ ಸಂರಕ್ಷಣೆಗಾಗಿ " ಪುರುಷೋತ್ತಮ ಪ್ರಶಸ್ತಿ",  2017ರ ಸಾಲಿನ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ " ಸೃಷ್ಠಿ ಸಂಮಾನ್" ಪುರಸ್ಕೃತರಾಗಿದ್ದಾರೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ತುಂಬಾ ಸಂತಸದ ವಿಚಾರ. ಇದು ಕೃಷಿಕರಿಗೆ ಅದರಲ್ಲಿಯೂ ಭತ್ತದ ಕೃಷಿಕರಿಗೆ ಬಂದಿರುವ ಗೌರವವಾಗಿದೆ. ಭತ್ತದ ಬೆಳೆ ಭೂಮಿಯಲ್ಲಿ ನೀರನ್ನು ಇಂಗಿಸುವ ಕಾರ್ಯವನ್ನು ಮಾಡುತ್ತದೆ. ನೀರಿನ ಮೂಲಗಳನ್ನು ಉಳಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಅದಕ್ಕಾಗಿ ಭತ್ತದ ಬೆಳೆಗೆ ಹೆಚ್ಚು ಬೆಂಬಲ ಪ್ರೋತ್ಸಾಹ ನೀಎಬೇಕಾಗಿದೆ

- ಬಿ.ಕೆ ದೇವರಾವ್.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News