ಪುತ್ತೂರು: ಸರಣಿ ಕಳವು ಪ್ರಕರಣ: ಆರೋಪಿ ಬಂಧನ
ಪುತ್ತೂರು; ಪುತ್ತೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಪುತ್ತೂರು ನಗರ ಪೊಲೀಸರು ರವಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೋಮವಾರ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರು ತಾಲೂಕಿನ ಕೊಯಿಲ ನಿವಾಸಿ ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಕುಂಬ್ಳೆ ಗ್ರಾಮದ ಕುಟ್ಟಿಯಲಪ್ಪು ಎಂಬಲ್ಲಿ ವಾಸವಾಗಿರುವ ಇಬ್ರಾಹಿಂ ಕಲಂದರ್ (31) ಬಂಧಿತ ಆರೋಪಿ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಆನೆಮಜಲು ಎಂಬಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ಈತನಲ್ಲಿದ್ದ ಕಳ್ಳತನಕ್ಕೆ ಉಪಯೋಗ ವಾಗುವ ಹಲವಾರು ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ಠಾಣೆಯಲ್ಲಿ 2, ಉಪ್ಪಿನಂಗಡಿ ಠಾಣೆ, ಕಡಬ ಠಾಣೆ, ವಿಟ್ಲ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಈತನ ವಿರುದ್ಧ ತಲಾ ಒಂದು ಪ್ರಕರಣಗಳು ದಾಖಲಾಗಿದ್ದು, ಈತ ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನದ ಕಾರ್ಯ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆಗಸ್ಟ್ 30ರಂದು ಪುತ್ತೂರು ನಗರ ನಿವಾಸಿ ಕಬೀರ್ ಮಾನವ ತಮ್ಮ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ನಗರ ಪೊಲೀಸರಿಗೆ ದೂರು ನೀಡಿದ್ದರು.
ಪುತ್ತೂರು ತಾಲೂಕಿನ ಕೊಂಬೆಟ್ಟು, ಕಬಕ, ಸಾಮೆತ್ತಡ್ಕ ಸೇರಿದಂತೆ ಹಲವು ಭಾಗಗಳಲ್ಲಿ ನಿರಂತರ ಸರಣಿ ಕಳ್ಳತನ ನಡೆಯುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾ ಎಸ್ಪಿ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರು ಪುತ್ತೂರು ನಗರಠಾಣಾ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ್, ಉಪ್ಪಿನಂಗಡಿ ಠಾಣಾ ಸಬ್‍ಇನ್ಸ್ ಪೆಕ್ಟರ್ ನಂದಕುಮಾರ್ ಹಾಗೂ ಬೆಳ್ಳಾರೆ ಠಾಣಾ ಸಬ್‍ಇನ್ಸ್ ಪೆಕ್ಟರ್ ಈರಯ್ಯ ಅವರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿದ್ದರು. ಪುತ್ತೂರು ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪತ್ತೆ ಕಾರ್ಯಾಚರಣಾ ತಂಡಗಳಲ್ಲಿ ಪುತ್ತೂರು ನಗರ ಎಎಸೈಗಳಾದ ಚಿದಾನಂದ, ಶ್ರೀಧರ್, ನಗರಠಾಣೆ, ಸಂಪ್ಯ ಠಾಣೆ ಮತ್ತು ಉಪ್ಪಿನಂಗಡಿ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಸ್ಕರಿಯ, ರಕ್ಷಿತ್, ಜಯರಾಮ, ಜಗದೀಶ್, ಹರಿಶ್ಚಂದ್ರ, ಇರ್ಷಾದ್, ವಿನಯ,ಅದ್ರಾಂ, ವಸಂತ, ಮಂಜುನಾಥ್, ಅನಿತಾ, ಲಕ್ಷ್ಮೀಶ, ದಿವಾಕರ, ಉದಯ ರೈ, ರಾಜ್‍ಕುಮಾರ್, ಆಂಜನೇಯ ರೆಡ್ಡಿ ಭಾಗವಹಿಸಿದ್ದರು.