ಕಂಟೈನರ್‌ನಲ್ಲಿ ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ

Update: 2019-10-28 17:12 GMT

ಉಡುಪಿ, ಅ.28: ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದ ಮಂದಿಯನ್ನು ಕಾಪು ಪೊಲೀಸರು ಅ.28ರಂದು ಕಟಪಾಡಿ ಜಂಕ್ಷನ್‌ನಲ್ಲಿ ಬಂಧಿಸಿದ್ದಾರೆ.

ಲಾರಿ ಚಾಲಕ ದಾವಣಗೆರೆಯ ತನ್ವೀರ್ ಅಹಮ್ಮದ್(25) ಮತ್ತು ಹೈದರ್ ಅಲಿ(24) ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಎತ್ತು, ಎಮ್ಮೆ ಮತ್ತು ಕೋಣಗಳನ್ನು ಪರ ವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.

ಲಾರಿಯಲ್ಲಿದ್ದ 10 ಎತ್ತು, 7 ಎಮ್ಮೆ ಮತ್ತು 1 ಕೋಣ ಸೇರಿದಂತೆ ಒಟ್ಟು 18 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಮಾಲಕ ಇಮ್ರಾನ್ ವಿರುದ್ದ ಪ್ರಕರಣದ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಜಾನುವಾರುಗಳನ್ನು ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಸೇರಿಸಲಾಗಿದೆ.

ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ನೀಡಿದ ಮಾಹಿತಿಯಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಕಾರ್ಕಳ ಪ್ರಭಾರ ಡಿವೈಎಸ್ಪಿ ಜೈಶಂಕರ್ ಹಾಗೂ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ಎಸ್ಸೈ ರಾಜಶೇಖರ್ ಬಿ.ಸಾಗನೂರ್, ಪ್ರೊಬೆಷನರಿ ಎಸ್ಸೈಗಳಾದ ಉದಯರವಿ ಮತ್ತು ಮಹಾದೇವ್ ಬೋಸ್ಲೆ, ಎಎಸ್ಸೈ ಕರುಣಾಕರ್, ಸಿಬ್ಬಂದಿಯವರಾದ ಗಿರೀಶ್, ಆನಂದ, ಶ್ರೀನಾಥ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಾದ ನಾಗೇಶ್ ಮತ್ತು ವೆಂಕಟರಮಣ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News