ಕರ್ನಾಟಕ ಸಂಗೀತದ ಒಲವು ಬೆಳೆಸಿ – ಎಂ.ಆರ್‌.ವಾಸುದೇವ್‌

Update: 2019-10-29 10:27 GMT

ಮಂಗಳೂರು, ಅ. 29: ‘ಮಂಗಳೂರಿನ ಜನತೆಯಲ್ಲಿ ಕರ್ನಾಟಕ ಸಂಗೀತ ಪರಂಪರೆಯ ಬಗ್ಗೆ ಹೆಚ್ಚಿನ ಒಲವು ಮೂಡಿಸುವ ಅಗತ್ಯ ಇದೆ, ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕಾಗಿದೆ’ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್‌.ವಾಸುದೇವ್‌ ಅವರು ತಿಳಿಸಿದ್ದಾರೆ.

ನಗರದ ರಥಬೀದಿಯ ವಾಸುದೇವ ಆರ್ಕೇಡ್‌ನಲ್ಲಿ ರವಿವಾರ ನಡೆದ ‘ಸ್ವರಲಯ’ದ 25ನೇ ವಯೊಲಿನ್‌ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಸಂಗೀತದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇದೀಗ ಹೆಚ್ಚಿನವರ ಒಲವು ಹಿಂದೂಸ್ತಾನಿ, ಯಕ್ಷಗಾನ ಕಾರ್ಯಕ್ರಮಗಳ ಕಡೆಗೆ ವಾಲುತ್ತಿದೆ. ಕರ್ನಾಟಕ ಸಂಗೀತಕ್ಕೆ ಭಕ್ತಿಯನ್ನು ಜಾಗೃತ ಗೊಳಿಸುವ ಶಕ್ತಿ ಇದೆ. ಪರಮಾತ್ಮನೊಂದಿಗೆ ಏಕತಾಭಾವ ಮೂಡಿಸಲು ಈ ಸಂಗೀತ ಪ್ರಕಾರದಿಂದ ಸಾಧ್ಯ. ಈ ನಿಟ್ಟಿನಲ್ಲಿ ನಗರದಲ್ಲಿರುವ ವಿವಿಧ ಸಂಗೀತ ಸಂಘ, ಸಂಸ್ಥೆಗಳು ಸಂಘಟಿತರಾಗಿ ಆಸಕ್ತರನ್ನು ಕರ್ನಾಟಕ ಸಂಗೀತ ಕಾರ್ಯಕ್ರಮಗಳತ್ತ ಸೆಳೆಯುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.

ಎರಡು ವರ್ಷಗಳ ಹಿಂದೆ ದೀಪಾವಳಿ ದಿನದಂದೇ ಈ ವಿಶೇಷ ಅಭ್ಯಾಸ ಶಿಬಿರಕ್ಕೆ ಚಾಲನೆ ನೀಡಲಾಗಿತ್ತು, ಇದೀಗ 25ನೇ ವಿಶೇಷ ಅಭ್ಯಾಸ ಶಿಬಿರ ದೀಪಾವಳಿ ಹಬ್ಬದ ದಿನದಂದೇ ನಡೆದಿರುವುದು ವಿಶೇಷವಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ವಯೊಲಿನ್‌ ವಿಶೇಷ ಅಭ್ಯಾಸ ನಡೆಸಿದರು. ಬಳಿಕ ನಡೆದ ವಿದ್ವಾನ್‌ ಪಿ ಮಧೂರು ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಎಂ.ಆರ್‌.ವಾಸುದೇವ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಮಧೂರು ಬಾಲಸು ಬ್ರಹ್ಮಣ್ಯಂ ಅವರಿಂದ ಸಂಗೀತ ಕಛೇರಿ ನಡೆಯಿತು. ವಯೊಲಿನ್‌ನಲ್ಲಿ ವಿಶ್ವಾಸ್‌ಕೃಷ್ಣ ಹಾಗೂ ಮೃದಂಗದಲ್ಲಿ ಮನೋಹರ ರಾವ್‌ ಸಹಕರಿಸಿದರು.ರಾಗತರಂಗ ಸಂಸ್ಥೆಯ ಅಧ್ಯಕ್ಷ ಅನಂತಕೃಷ್ಣ ಉಡುಪ, ಮಧುರಧ್ವನಿ ಸಂಸ್ಥೆಯ ರವಿಪ್ರಸಾದ್‌, ವೆಂಕಟೇಶ್‌ ಭಟ್‌, ಸಂಗೀತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News