ಗ್ರಾಹಕನ ಖಾತೆಯಿಂದ 145 ರೂ. ಕಡಿತಗೊಳಿಸಿದ ಎಸ್‌ಬಿಐಗೆ 2 ಸಾವಿರ ರೂ.ದಂಡ

Update: 2019-10-29 14:19 GMT

ಬೆಂಗಳೂರು, ಅ.29: 79 ವರ್ಷದ ಹಿರಿಯ ನಾಗರಿಕರೊಬ್ಬರ ಉಳಿತಾಯ ಖಾತೆಯಿಂದ 145 ರೂ. ಅನ್ನು ಕಡಿತಗೊಳಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(ಎಸ್‌ಬಿಐ) ನಗರದ ಗ್ರಾಹಕರ ಹಿತರಕ್ಷಣಾ ನ್ಯಾಯಾಲಯವು 2 ಸಾವಿರ ರೂ.ದಂಡ ವಿಧಿಸಿದೆ. ಅಲ್ಲದೆ, ಕಾನೂನು ಪ್ರಕ್ರಿಯೆ ವೆಚ್ಚವಾಗಿ 1 ಸಾವಿರ ರೂ. ನೀಡುವಂತೆಯೂ ಸೂಚಿಸಿದೆ. 

ಬೆಂಗಳೂರಿನ ನಿವಾಸಿ ಎಂ.ವೇಲಾಯುಧನ್ ಪಿಳ್ಳೈ ಅವರ ಉಳಿತಾಯ ಖಾತೆಯಿಂದ 2017ರ ನ.23ರಂದು 145 ರೂ.ಕಡಿತವಾಗಿತ್ತು (ಒಂದು ಸಲ 88.3 ರೂ. ಮತ್ತು 57.5 ರೂ.). ಈ ಬಗೆಗಿನ ಎಸ್‌ಎಂಎಸ್‌ಗಳನ್ನು ನೋಡಿದ ಪಿಳ್ಳೈ, ಎಸ್‌ಬಿಐ ಸಹಾಯವಾಣಿಗೆ ತಕ್ಷಣ ಕರೆ ಮಾಡಿದ್ದರು. ಆದರೆ, ಸೂಕ್ತ ವಿವರಣೆ ಸಿಗಲಿಲ್ಲ. ಶಾಖೆಗೆ ತೆರಳಿ ವ್ಯವಸ್ಥಾಪಕರನ್ನೂ ವಿಚಾರಿಸಿದ್ದರು. ಪದೇ ಪದೇ ವಿವರಣೆ ಕೋರಿ ಬ್ಯಾಂಕಿಗೆ ಅಲೆದಾಡಿದರೂ ಸೂಕ್ತ ವಿವರಣೆ ಸಿಕ್ಕಿರಲಿಲ್ಲ. ಈ ಕಾರಣ ಅವರು ಬೆಂಗಳೂರಿನ 3ನೆ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕ ಬಿಕ್ಕಟ್ಟು ನಿವಾರಣಾ ವೇದಿಕೆಗೆ ಮೊರೆ ಹೋಗಿದ್ದರು. 2017ರ ಡಿ.21ರಂದು ದೂರು ದಾಖಲಿಸಿದ್ದರು. ಸತತ 22 ತಿಂಗಳ ಕಾನೂನು ಸಮರದ ಬಳಿಕ ಅವರಿಗೆ ನ್ಯಾಯ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News