ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆ

Update: 2019-10-29 15:43 GMT

ಮಂಗಳೂರು, ಅ. 29: ಅರಬ್ಬೀ ಸಮುದ್ರದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ‘ಕ್ಯಾರ್’ ಚಂಡಮಾರುತವು ಒಮನ್‌ನತ್ತ ತನ್ನ ದಿಕ್ಕು ಬದಲಿಸಿದರೂ ಕೂಡ ಮಂಗಳವಾರ ರಾತ್ರಿ ಮಂಗಳೂರು ಸಹಿತ ಜಿಲ್ಲೆಯ ಹಲವು ಕಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಮತ್ತೆ ಚಂಡಮಾರುತದ ಭೀತಿ ಎದುರಾಗಿದೆ.

ಎರಡು ದಿನದಿಂದ ಕರಾವಳಿ ತೀರದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿತ್ತು. ಮಂಗಳವಾರ ಹಗಲಿಡೀ ಬಿಸಿಲು ಆವರಿಸಿದ್ದರೆ ರಾತ್ರಿ ಸುಮಾರು 8 ಗಂಟೆಯ ಬಳಿಕ ಗುಡುಗು-ಮಿಂಚಿನ ಆರ್ಭಟದಿಂದ ಮತ್ತೆ ಆತಂಕದ ಛಾಯೆ ಸೃಷ್ಟಿಸಿದೆ. ಜಿಲ್ಲೆಯ ಮಂಗಳೂರು, ಉಳ್ಳಾಲ, ದೇರಳಕಟ್ಟೆ, ಸುರತ್ಕಲ್, ಬಂಟ್ವಾಳ ಸಹಿತ ತಾಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತವಾಗಿ ಮತ್ತೆ ಅರಬ್ಬೀ ಸಮುದ್ರದಲ್ಲಿ ತನ್ನ ಆರ್ಭಟ ತೋರ್ಪಡಿಸುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆಯು ತಿಳಿಸಿತ್ತು. ಅದರಂತೆ ಮಂಗಳವಾರ ರಾತ್ರಿಯೇ ಮಳೆ, ಗುಡುಗು, ಮಿಂಚು ಕಾಣಿಸಿಕೊಂಡಿದ್ದು, ಅ.31ರವರೆಗೆ ಇದು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News