ಅಂತರಂಗದ ಶುದ್ಧಿಯಿಂದ ಸೌಹಾರ್ದ ಬದುಕು ಸಾಧ್ಯ: ಮಹಾಲಿಂಗು
ಉಡುಪಿ, ಅ.29: ಮನಸ್ಸಿನಲ್ಲಿ ಮೂಢನಂಬಿಕೆ, ಧ್ವೇಷ, ಅಸೂಯೆ ಇದ್ದರೆ ಅಂಧಕಾರ ಮೂಡುತ್ತದೆ. ಇದರಿಂದ ಸೌಹಾರ್ದ ಜೀವನ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಂತರಂಗದ ಶುದ್ಧಿ ಮಾಡಬೇಕು. ಆಗ ಅಂಧಕಾರ ತೊಲಗಿ ಸೌಹಾರ್ದತೆ ಮೂಡಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯ ಉಡುಪಿ ಪ್ರಾದೇಶಿಕ ನಿರ್ದೇಶಕ ಕೆ.ಪಿ.ಮಹಾಲಿಂಗು ಹೇಳಿದ್ದಾರೆ.
ಉಡುಪಿ ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಅಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ ಸರ್ವಧರ್ಮ ದೀಪಾವಳಿ ಆಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತದ ಸರ್ವಧರ್ಮಗಳ ಹಬ್ಬಗಳಲ್ಲಿಯೂ ಸೌರ್ಹಾದತೆಯನ್ನು ಕಾಣ ಬಹುದಾಗಿದೆ. ದೀಪಾವಳಿ ಅಜ್ಞಾನದಿಂದ ಜ್ಞಾನದ ಕಡೆ ಕರೆದುಕೊಂಡು ಹೋಗುವ ಹಬ್ಬ. ವಿಶ್ವಾಸ, ಪ್ರೀತಿಯಿಂದ ಅನ್ಯರ ಸುಖದುಃಖ ನಮ್ಮ ಸುಖ ದುಃಖ ಎಂಬುದಾಗಿ ತಿಳಿದುಕೊಂಡರೆ ಸೌಹಾರ್ದತೆಯ ವಾತಾವರಣ ನಿರ್ಮಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಅಂತರಂಗವ್ನು ಶುದ್ದಿ ಮಾಡ ಬೇಕು ಎಂದರು.
ಅಧ್ಯಕ್ಷತೆಯನ್ನು ಶೋಕಮಾತ ಇಗರ್ಜಿಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೇಖಕ ಜಿ.ಎಂ.ಶರೀಫ್ ಹೂಡೆ, ಉಡುಪಿ ಸಿಎಸ್‌ಐ ಜುಬ್ಲಿ ಚರ್ಚ್ ಪಾಸ್ಟರ್ ಕಿಶೋರ್ ಕುಮಾರ್ ಮಾತನಾಡಿದರು.
ಸೌಹಾರ್ದ ಸಮಿತಿ ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿದರು. ಸದಸ್ಯ ಚಾರ್ಲ್ಸ್ ಆ್ಯಂಬ್ಲರ್ ವಂದಿಸಿದರು. ಆಯೋಗಗಳ ಸಂಯೋಜಕ ಅಲ್ಫೊನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೃಹತ್ ಗಾತ್ರದ ಗೋಪುರ ದೀಪದ ಪ್ರದರ್ಶನ, ಗೂಡುದೀಪಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಿಹಿ ತಿಂಡಿ ವಿತರಣೆ ನಡೆಯಿತು.