ಹೆಜಮಾಡಿಯಲ್ಲೊಂದು ಅಪೂರ್ವ ಕುಟುಂಬ ಸಮ್ಮಿಲನ

Update: 2019-10-29 17:22 GMT

ಪಡುಬಿದ್ರಿ: ದೂರವಾಗುತ್ತಿರುವ ಸಂಬಂಧಗಳನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಹೆಜಮಾಡಿಯ ಹೈಬಾ ಆಡಿಟೋರಿಯಂನಲ್ಲಿ ರವಿವಾರ ನಡೆದ ದಿವಂಗತ ಮಡ್ಮಣ್ ಅಬೂಬಕ್ಕರ್ ಬ್ಯಾರಿ ಕುಟುಂಬಿಕರ ಸಮ್ಮಿಲನವು ಒಂದು ಐತಿಹಾಸಿಕ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

ಮುಲಾಖಾತ್ -2019 ಅವಿಭಕ್ತ ಸಂಭ್ರಮ ಎಂಬ ಹೆಸರಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಮಂದಿ ಪಾಲ್ಗೊಂಡು ತಮ್ಮ ಕುಟುಂಬ ಸದಸ್ಯರನ್ನು ಪರಿಚಯಿಸಿಕೊಂಡರು. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಆಟಗಳು, ಬಹುಮಾನ, ಕ್ಷಿಝ್‍ಗಳನ್ನು ಆಯೋಜಿಸಲಾಯಿತು.

ಕುಟುಂಬದ ಮೂರನೇ ತಲೆಮಾರಿನ ಹಿರಿಯ ನಾಲ್ಕು ಮಂದಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಈ ಕುಟುಂಬದಲ್ಲಿ ಐಎಎಸ್ ತರಬೇತಿ ಪಡೆಯುತ್ತಿರುವ ರಕೀಬ್ ಕನ್ನಂಗಾರ್ ಸಹಿತ, ಮೂವರು ವೈದ್ಯರು, 16 ಎಂಜಿನಿಯರ್ಸ್, ಮೂವರು ಶರೀಅತ್ ಪದವಿ ಪಡೆದವರನ್ನು ಹಾಗೂ ಪ್ರತಿಭಾವಂತರನ್ನು  ಅಭಿನಂದಿಸಲಾಯಿತು.

ಮಡ್ಮಣ್ ಕುಟುಂಬದ ಬಗ್ಗೆ: 145 ವರ್ಷಗಳ ಹಿಂದೆ ಇನ್ನಾ ಗ್ರಾಮದ ಮಡ್ಮಣ್ ಪರಿಸರದಲ್ಲಿ ಅಬೂಬಕ್ಕರ್ ಬ್ಯಾರಿ ವಾಸವಿದ್ದರು. ಕೃಷಿಕರಾಗಿದ್ದ ಇವರು ಈ ಪರಿಸರದಲ್ಲಿ ಯಾವದೇ ಸಮಸ್ಯೆಗಳು ಬಂದಾಗ ಅದನ್ನು ಪಂಚಾಯಿತಿ ಕಟ್ಟೆಯಲ್ಲಿ ಪರಿಹರಿಸಿಕೊಳ್ಳುತಿದ್ದರು. ಅವರ ಆರು ಮಕ್ಕಳು ಹೆಜಮಾಡಿ, ಪಡುಬಿದ್ರಿ ಪರಿಸರದಲ್ಲಿ ಬಂದು ನೆಲೆಸಿದ್ದರು. ಅವರ ಮಕ್ಕಳ ಬಳಿಕ ಕುಟುಂಬ ಸಂಬಂಧ ಚದುರಿಹೋಗಿತ್ತು. ಮತ್ತೆ ಈ ಕುಟುಂಬ ವನ್ನು ಜೋಡಿಸುವ ನಿಟ್ಟಿನಲ್ಲಿ ಅಬೂಬಕ್ಕರ್ ಬ್ಯಾರಿಯವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಮುಂದಿನ ಜನಾಂಗಕ್ಕೆ ತಮ್ಮ ಕುಟುಂಬದ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ 800ಕ್ಕೂ ಅಧಿಕ ಮಂದಿ ಪಾಲ್ಗೊಂಡರು.

ಬೆಳಗ್ಗೆ 9ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ಸಂಜೆ 5ಗಂಟೆಯವರೆಗೆ ನಡೆಯಿತು. ಹಿರಿಯ ವ್ಯಕ್ತಿ ಹಾಜಿ ಎಂ.ಎಚ್.ಅಬೂಬಕ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಬ್ಬಾಸ್ ಹಾಜಿ ಕನ್ನಂಗಾರ್ ಕುಟುಂಬದ ತಲೆಮಾರಿನ ವಿವರನ್ನು ನೀಡಿದರು. 

ದಿವಂಗತ ಮಡ್ಮಣ್ ಅಬೂಬಕ್ಕರ್ ಬ್ಯಾರಿ ಕುಟುಂಬದ ಅಧ್ಯಕ್ಷ ಹಾಜಿ ಪಿ.ಎಂ. ಉಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಟ್ಟು ಹಾಜಿ ಎಂ.ಎಚ್.ಹಮ್ಮಬ್ಬ, ಎಂ. ಎಸ್. ಸುಲೈಮಾನ್, ಪಿ. ಎಂ. ಅರಬ್ಬಿ ಹಾಜಿ, ಅಬೂಬಕ್ಕರ್ ಎಂ.ಎಸ್.ಮುಹಮ್ಮದ್ ಮಟ್ಟು, ಎಂ.ಎಸ್. ಸುಲೈಮಾನ್, ಯುವ ಕಾಂಗ್ರೆಸ್‍ನ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಹಸ್ಸಿರ್ ಸಾಮಣಿಗೆ, ಎಂ.ಎಸ್. ಅಬ್ದುಲ್ ಖಾದರ್ ಮಟ್ಟು, ಎಚ್. ಎಸ್. ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು. 

ಕಾರ್ಯದರ್ಶಿ ಪಿ.ಎಂ. ಶರೀಫ್ ಸ್ವಾಗತಿಸಿದರು. ಪಿ.ಎ. ಅಬ್ದುಲ್ ಹಮೀದ್, ಸಯೀದ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು.

''ಅಜ್ಜ ಮಡ್ಮಣ್ ಅಬೂಬಕ್ಕರ್ ಅವರನ್ನು ನೆನಪಿಸುವ ಉದ್ದೇಶದಿಂದ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಅವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಸುಮಾರು 800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಸಾವಿರಕ್ಕೂ ಹೆಚ್ಚಿನ ಮಂದಿ ಮಡ್ಮಣ್ ಕುಟುಂಬಸ್ಥರಿದ್ದು, 200ಕ್ಕೂ ಅಧಿಕ ಮಂದಿ  ವಿದೇಶದಲ್ಲಿದ್ದಾರೆ. ವಿವಿದೆಡೆಗಳಲ್ಲಿ ಇರುವ ಎಲ್ಲಾ ಮಡ್ಮಣ್ ಕುಟುಂಬಸ್ಥರನ್ನು ಒಂದು ಗೂಡಿಸಲಾಗಿದೆ. ಮರೆಯಾಗುತ್ತಿರುವ ಸಂಬಂಧಗಳನ್ನು ಒಂದು ಗೂಡಿಸಿ ಕುಟುಂಬವನ್ನು ಸಂಘಟಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮ ನಿರೀಕ್ಷಗೂ ಮೀರಿ ಯಶಸ್ವಿಯಾಗಿದೆ.''

- ಎಂ.ಎಸ್. ಅಬ್ಬಾಸ್ ಹಾಜಿ, ಕಾರ್ಯಕ್ರಮ ಸಂಘಟಕ

''ಮುಂದೆಯೋ ಇಂಥಹ ಕಾರ್ಯಕ್ರಮಗಳನ್ನು ಆಯೋಜಸಿ ಮಡ್ಮಣ್ ಕುಟುಂಬದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ, ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಲ್ಲದೆ ಆರೋಗ್ಯ ಸೇವೆಯನ್ನು ನೀಡಲು ಬೇಕಾದ ವ್ಯವಸ್ಥೆಯನ್ನು ಮಾಡುವ ಯೋಜನೆ ಇದೆ.''

- ಎಂ.ಎಚ್. ಅಬ್ದುಲ್ ಖಾದರ್, ಕಾರ್ಯಕ್ರಮ ಸಂಘಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News