ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಮಸ್ಯೆ: ಜಿಪಿಎಸ್ ಬ್ಲಾಕ್ ತೆರವಿಗೆ ತಾಪಂ ಸಾಮಾನ್ಯ ಸಭೆಯಲ್ಲಿ ಆಗ್ರಹ

Update: 2019-10-30 12:37 GMT

ಉಡುಪಿ, ಅ.30: ಮರಳಿನ ಸಮಸ್ಯೆಯಿಂದ ಪ್ರಧಾನಮಂತ್ರಿ ಆವಾಸ್ ಹಾಗೂ ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸದೆ ಬಾಕಿ ಇರಿಸಿದವರ ಜಿಪಿಎಸ್ ಬ್ಲಾಕ್ ಆಗಿದ್ದು, ಇದೀಗ ಅವರಿಗೆ ಮನೆ ನಿರ್ಮಿಸಲು ಸಾಧ್ಯವಾಗ ದಿರುವುದರಿಂದ ಅದನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಬುಧವಾರ ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಧೀರ್ ಕುಮಾರ್ ಶೆಟ್ಟಿ, ಮರಳು ಇಲ್ಲದ ಕಾರಣ ಇವರೆಲ್ಲ ಮನೆ ನಿರ್ಮಿಸಿಲ್ಲ. ಇದೀಗ ಮರಳು ದೊರೆಯಲು ಆರಂಭವಾಗಿರುವುದರಿಂದ ಇವರೆಲ್ಲ ಮನೆ ನಿರ್ಮಿಸಲು ಮುಂದಾಗಿದ್ದು, ನಿಗದಿ ಸಮಯ ಮೀರಿದ ಹಿನ್ನೆಲೆಯಲ್ಲಿ ಜಿಪಿಎಸ್ ಬ್ಲಾಕ್ ಆಗಿದೆ. ಇದರಿಂದ ನೂರಾರು ಫಲಾನುಭವಿಗಳು ಸಮಸ್ಯೆಗೆ ಸಿಲುಕಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಹಾಜರಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಜಿಪಿಎಸ್ ಬ್ಲಾಕ್ ತೆಗೆಯುವಂತೆ ವಸತಿ ಸಚಿವರೊಂದಿಗೆ ಮಾತನಾಡಿದ್ದು, ಅವರು ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ. ಅದನ್ನು ಸಿದ್ಧಪಡಿಸಿಕೊಟ್ಟರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಅಪಾಯಕಾರಿ ಮರಗಳ ತೆರವು: ರಸ್ತೆ ಬದಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಕಳೆದ ಮೂರು ವರ್ಷಗಳಿಂದ ಒತ್ತಾಯಿಸಿದರೂ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಲಕ್ಷ್ಮೀ ನಾರಾಯಣ ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಈ ಬಗ್ಗೆ ಇತ್ತೀಚೆಗಷ್ಟೆ ಲೋಕೋಪಯೋಗಿ ಇಲಾಖೆಯಿಂದ ನಮಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ಜಂಟಿ ಸರ್ವೆ ನಡೆಸಿ ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದರು.

ಮೈಕಲ್ ರಮೇಶ್ ಡಿಸೋಜ ಮಾತನಾಡಿ, ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮಲಗಿದ್ದರೆ ಸಿಬ್ಬಂದಿ ಸಮೀಪದಲ್ಲೇ ಇರುವ ತಮ್ಮ ಮನೆಗಳಲ್ಲಿ ಇರುತ್ತಾರೆ. ಈ ಸಂಬಂಧ ಕೇಂದ್ರಗಳಿಗೆ ಭೇಟಿ ನೀಡಿದರೆ ನಿಜ ಬಣ್ಣ ತಿಳಿಯುತ್ತದೆ. ಆದುದರಿಂದ ಹತ್ತಿರದಲ್ಲೇ ಮನೆ ಇರುವ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರನ್ನು ದೂರ ಕೇಂದ್ರಗಳಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸುಧೀರ್ ಕುಮಾರ್, ಅಂಗನವಾಡಿ ಸಿಬ್ಬಂದಿ ಸಮಯ ಪರಿಪಾಲನೆ ಮಾಡಬೇಕು. ಅದಕ್ಕಾಗಿ ಪ್ರತಿ ಕೇಂದ್ರಗಳಲ್ಲಿ ಸಮಯದ ಪಟ್ಟಿಯನ್ನು ಆಳವಡಿಸಬೇಕು ಎಂದರು. ಸದಸ್ಯರ ದೂರಿಗೆ ಉತ್ತರಿಸಿದ ಶಿಶು ಯೋಜನಾಧಿಕಾರಿ ವೀಣಾ, ತಿಂಗಳಲ್ಲಿ ಎರಡು ಸಭೆಗಳನ್ನು ಬಿಟ್ಟರೆ ಉಳಿದ ಸಮಯ ಎಲ್ಲ ಸಿಬ್ಬಂದಿ ಅಂಗನವಾಡಿ ಕೇಂದ್ರದಲ್ಲೇ ಇರಬೇಕು. ಸಮಯ ಪರಿಪಾಲನೆಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಬೀದಿನಾಯಿಗಳ ಸಂತಾನಹರಣ: ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಕುರಿತು ಲಕ್ಷ್ಮೀನಾರಾಯಣ ಪ್ರಭು ಸಭೆಯ ಗಮನ ಸೆಳೆದರು. ಮನೆಯವರು ತ್ಯಾಜ್ಯಗಳನ್ನು ಎಸೆಯುವುದರಿಂದ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ನಾವೇ ಕಾರಣಕರ್ತರು. ಆದುದರಿಂದ ಮೊದಲು ನಮ್ಮಲ್ಲಿ ಜಾಗೃತಿ ಬರಬೇಕು ಎಂದು ನಳಿನಿ ಪ್ರದೀಪ್ ರಾವ್ ಹೇಳಿದರು.

ಬೀದಿನಾಯಿಗಳ ಸಂತಾನಹರಣಕ್ಕೆ ಪ್ರತಿ ಗ್ರಾಪಂಗಳಲ್ಲಿ ಹಣ ಮೀಸಲಿರಿಸ ಲಾಗಿರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರತಿ ಗ್ರಾಪಂಗಳಿಗೆ ಪತ್ರ ಬರೆಯಬೇಕು ಎಂದು ಸುಧೀರ್ ಕುಮಾರ್ ಒತ್ತಾಯಿಸಿದರು. ಹಲವು ಅಪಘಾತಗಳಿಗೆ ಬೀದಿ ನಾಯಿಗಳು ಕೂಡ ಕಾರಣವಾಗುತ್ತಿವೆ. ಆದುದರಿಂದ ಅದರ ಪೋಷಣೆಗೆ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಸದಸ್ಯರೊಬ್ಬರು ಸಲಹೆ ನೀಡಿದರು.

ನಾಮನಿರ್ದೇಶಿತ ಸದಸ್ಯರಾದ ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಆನ್‌ಲೈನ್‌ನಲ್ಲಿ ಕೆಲಸ ಆಗುತ್ತಿಲ್ಲ. ಅದರ ಬದಲು ಅರ್ಜಿ ಸಲ್ಲಿಸಿ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಹೆಸರು ಸೇರ್ಪಡೆಗೊಳಿಸಲು ಹೋದವರಿಗೆ ಬಿಎಲ್‌ಓಗಳೇ ಸೈಬರ್‌ಗೆ ಹೋಗುವಂತೆ ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಗೀತಾ ವಾಗ್ಳೆ ದೂರಿದರು. ಇದೀಗ ಸರ್ವರ್ ಸಮಸ್ಯೆ ಸರಿಯಾಗಿದೆ. ಕೆಲವು ಬಿಎಲ್‌ಓಗಳಿಗೆ ಸ್ಮಾರ್ಟ್‌ಫೋನ್ ಆಪರೇಟ್ ಮಾಡಲು ಗೊತ್ತಿಲ್ಲದ ಕಾರಣ. ಅವರು ಅನಿವಾರ್ಯವಾಗಿ ಸೈಬರ್ ಕೇಂದ್ರಕ್ಕೆ ಹೋಗಲು ಸೂಚಿಸುತ್ತಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.

ತಾಪಂನಿಂದ ತರಬೇತಿ ಕೇಂದ್ರ ಸ್ಥಾಪನೆ
ಉಡುಪಿ ತಾಪಂಗೆ ಕಳೆದ ವರ್ಷ ದೊರೆತ ದೀನ್‌ದಯಾಳ್ ಪುರಸ್ಕಾರದಲ್ಲಿ ಬಂದ 25 ಲಕ್ಷ ರೂ. ಹಣದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸ ಲಾಗಿದ್ದು, ಅದಕ್ಕಾಗಿ ತಾಪಂ ಕಚೇರಿ ಸಮೀಪದಲ್ಲೇ ಇರುವ ಅಕ್ಷರ ದಾಸೋಹ ಕಚೇರಿಯ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ತಿಳಿಸಿದರು.

ಅಕ್ಷರ ದಾಸೋಹ ಕಚೇರಿಯನ್ನು ತೆರವುಗೊಳಿಸಿ ಅಲ್ಲಿ ಸುಮಾರು 1200 ಚದರಅಡಿ ವಿಸ್ತ್ರೀರ್ಣದ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಮೂಲಕ ತಾಪಂಗೆ ಆದಾಯದ ಮೂಲವನ್ನು ಮಾಡಲಾಗುವುದು. ಅಕ್ಷರ ದಾಸೋಹದ ಕಚೇರಿಯನ್ನು ತಾಪಂ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಅವರು ಹೇಳಿದರು.

ಕಿಸಾನ್ ಸಮ್ಮಾನ್‌ನಲ್ಲಿ 1,33,122 ಅರ್ಜಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಲ್ಲಿಸಿದ ಅರ್ಜಿ ಸ್ವೀಕೃತಗೊಂಡರೂ ಕೆಲವು ಮಂದಿಯ ಖಾತೆಗೆ ಇನ್ನು ಹಣ ಬಂದಿಲ್ಲ. ಆದುದರಿಂದ ಅವರು ಮತ್ತೆ ಅರ್ಜಿ ಹಾಕಲು ಅವಕಾಶ ಇದೆಯೇ ಎಂದು ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಸಹಾಯಕ ನಿರ್ದೇಶಕ ಮೋಹನ್‌ರಾಜ್, ಈ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 1,33,122 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 1,05,301 ಮಂದಿಗೆ ಮೊದಲ ಕಂತು, 64,829 ಮಂದಿಗೆ ಎರಡನೆ ಕಂತು ಹಾಗೂ 3475 ಮಂದಿಗೆ ಮೂರನೆ ಕಂತಿನ ಹಣ ಪಾವತಿಯಾಗಿದೆ. ಈ ಬಗ್ಗೆ ಅರ್ಜಿ ಸ್ವೀಕೃತಗೊಂಡ ಎಲ್ಲರಿಗೂ ಹಣ ಬರುವುದು ಖಚಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಅರ್ಜಿ ಸ್ವೀಕಾರ ಆಗದವರು ಮಾತ್ರ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News