ರಾಜ್ಯೋತ್ಸವಕ್ಕೆ ಪರಿಸರ ಸ್ನೇಹಿ ಬಾವುಟ....

Update: 2019-10-30 13:54 GMT

ಮಂಗಳೂರು,ಅ.30: ಈ ಬಾರಿಯ ಕನ್ನಡ ರಾಜ್ಯೋತ್ಸವ ಪರಿಸರ ಸ್ನೇಹಿಯಾಗಿ ಆಚರಿಸಲು ಇಕೋ ಫ್ರೆಂಡ್ಸ್ ಕ್ಲಬ್ ತಯಾರಿ ನಡೆಸಿದೆ.

ಇಕೋ ಫ್ರೆಂಡ್ಸ್ ವತಿಯಿಂದ ವಿಭಿನ್ನ ಮಾದರಿಯ ಪರಿಸರ ಸ್ನೇಹಿ ಬೀಜ ಬಾವುಟಗಳನ್ನು ತಯಾರಿಸಿದೆ. ಈ ಬಾವುಟ ಸುಲಭವಾಗಿ ಮಣ್ಣಿನಲ್ಲಿ ಕರಗುತ್ತದೆ. ಅಷ್ಟೇ ಅಲ್ಲ, ಈ ಬಾವುಟದಲ್ಲಿ ವಿವಿಧ ಬೀಜಗಳಿರುತ್ತವೆ. ಮಣ್ಣಿನ ಜೊತೆ ದಪ್ಪ ಪೇಪರಿನಲ್ಲಿ ಬೇರೆಬೇರೆ ಕಾಯಿ ಬೀಜವನ್ನು ಅಳವಡಿಸಲಾಗಿದೆ. ಈ ಕಾಗದದ ಬಾವುಟ ಭೂಮಿಯಲ್ಲಿ ಬಿದ್ದರೆ ಅದರಲ್ಲಿ ಬೀಜ ಮೊಳಕೆ ಒಡೆದು ಗಿಡವಾಗಿ ಬೆಳೆಯುತ್ತದೆ.

ಇಕೋ ಪ್ರೆಂಡ್ಸ್ ಮಂಗಳೂರು ವತಿಯಿಂದ ಅನೇಕ ವರ್ಷಗಳಿಂದ ಇಂಥ ಪರಿಸರ ಪ್ರೇಮಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ದೀಪಾವಳಿಯಲ್ಲಿ ಭಿನ್ನ-ವಿಭಿನ್ನ ರೀತಿಯ ಮಣ್ಣಿನ ಹಣತೆಗಳನ್ನು ವಿತರಿಸಿದೆ. ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ಪರಿಸರಸ್ನೇಹಿ ಬಾವುಟ ತಯಾರಿಸಿದ್ದಾರೆ.

ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಾವುಟಗಳ ಬದಲು ಈ ರೀತಿಯ ಪರಿಸರ ಸ್ನೇಹಿ ಕನ್ನಡ ಬಾವುಟಗಳನ್ನು ಮಾರಾಟ ಮಾಡುವ ಮೂಲಕ ಹಲವು ಉದ್ದೇಶ ಒಂದರಿಂದ ಈಡೇರಿದಂತಾಗುತ್ತದೆ. ಪ್ಲಾಸ್ಟಿಕ್ ಸೀಡ್ ಬಾವುಟ ಪರಿಸರಕ್ಕೆ ಹಾನಿ ಮಾಡದೆ ಪರಿಸರ ಸಂರಕ್ಷಣೆ ಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ ಎಂದು ಇಕೋ ಕ್ಲಬ್ ನ ಸದಸ್ಯರು ಅಭಿಪ್ರಾಯಪಡುತ್ತಾರೆ.

ಬಾವುಟಗಳು ರಸ್ತೆ ಬದಿಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿಯ ಒಡಲನ್ನು ಸೇರಿ ಹಾನಿ ಉಂಟು ಮಾಡುತ್ತಿದೆ ಇದರಿಂದ ಜೀವಸಂಕುಲದ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಕಾರಣದಿಂದ ಸೀಡ್ ಬಾವುಟಗಳನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ನಮ್ಮಲ್ಲಿ ಬಂದಿತ್ತು ಜೈವಿಕ ಕಾಗದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮವಾಗಲಿದೆ ಎಂಬ ನಂಬಿಕೆ ನಮಗೆ ಮೂಡಿತ್ತು. ನೀರು ಸಹ ಉಳಿತಾಯ ಮಾಡಲಿವೆ. ಈ ಬಾವುಟದಲ್ಲಿ ಬಳಸುವ ಬಣ್ಣ ಕೂಡ ಪರಿಸರಕ್ಕೆ ಯಾವುದೇ ಹಾನಿ ಮಾಡಲ್ಲ ಎಂದು ಇಕೋ ಫ್ರೆಂಡ್ಸ್ ಗ್ರೂಪ್ ಮುಖ್ಯಸ್ಥ ರಾಜೇಶ್ ವಿವರಣೆ ನೀಡುತ್ತಾರೆ.

ಕನ್ನಡ ರಾಜ್ಯೋತ್ಸವದ ಪರಿಸರಸ್ನೇಹಿ ಬಾವುಟವನ್ನು ಉಚಿತವಾಗಿ ನಗರದ ವಿವಿಧ ಶಾಲಾ ಮಕ್ಕಳಿಗೆ ನೀಡಲಾಗುವುದು ಮತ್ತು ಮಣ್ಣುಗುಡ್ಡದಲ್ಲಿ ರವಿವಾರ ನಡೆಯುವ ಸಾವಯವ ಸಂತೆಯಲ್ಲಿ ಉಚಿತವಾಗಿ ನೀಡಲಾಗುವುದು. ಆಸಕ್ತಿವುಳ್ಳವರು ಮೊಬೈಲ್ ಸಂಖ್ಯೆ 9972237055 ಸಂಪರ್ಕಿಸಬಹುದು ಎಂದು ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News